Chintamani : ಬೆಂಗಳೂರಿನ ಒಸಾಟ್ ಸಂಸ್ಥೆ ‘ಒಸಾಟ್ ನವೀನ ಶಾಲಾ ಯೋಜನೆ’ (OSAT innovative school project) ಕಾರ್ಯಕ್ರಮದಲ್ಲಿ ಚಿಂತಾಮಣಿ ನಗರದ ವೆಂಕಟಗಿರಿಕೋಟೆ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಆರು ತರಗತಿ ಕೊಠಡಿ ಮತ್ತು ಶೌಚಾಲಯವನ್ನು ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (MC Sudhakar) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು “ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಭಾರತೀಯರು ಹೊಂದಿಕೊಳ್ಳಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಬಡವರು ಮತ್ತು ಶ್ರೀಮಂತರ ಅಂತರವನ್ನು ಯಾವ ರೀತಿ ಕಡಿಮೆ ಮಾಡಬಹುದು ಎಂಬ ಚಿಂತನೆ ನಡೆಯಬೇಕಿದೆ. ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ₹1.75ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಟಿವಿ, ಯು.ಪಿ.ಎಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಂಪ್ಯೂಟರ್ ನೀಡಲಾಗುವುದು. ಸರ್ಕಾರಿ ಪಾಲಿಟೆಕ್ನಿಕ್‌ಗೆ₹ 45ಕೋಟಿ ವೆಚ್ಚದಲ್ಲಿ ಆಡಳಿತ ವಿಭಾಗದ ಬ್ಲಾಕ್, ಸುಸಜ್ಜಿತ ಆಡಿಟೋರಿಯಂ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು ಬಜೆಟ್ ನಲ್ಲಿ ಹಣ ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್ ಜಗನ್ನಾಥ್, ಉಪಾಧ್ಯಕ್ಷೆ ಕೆ.ರಾಣಿಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ, ತಾಲ್ಲೂಕು ಪಂಚಾಯಿತಿ ಇಒ ಎಸ್.ಆನಂದ್, ಪೌರಾಯುಕ್ತ ಚಲಪತಿ, ಒಸಾಟ್ ಸಂಸ್ಥೆ ಅಧ್ಯಕ್ಷ ವಾದರಾಜ ಭಟ್, ಕಟ್ಟಡ ವಿನ್ಯಾಸಕ ಎನ್.ಭಾರಧ್ವಾಜ್, ಸದಸ್ಯರಾದ ವೀರಣ್ಣಗೌಡ, ಹರೀಶ್, ಮೂರ್ತಿ, ಎಲ್.ವಿ.ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.