Chintamani : ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್‌ನೊಂದಿಗೆ ಬುಧವಾರ ಚಿಂತಾಮಣಿ ನಗರದ ಎಂ.ಜಿ.ರಸ್ತೆಯಲ್ಲಿ ಪಾದಚಾರಿ ಮಾರ್ಗದ (Pedestrian path) ಒತ್ತುವರಿಯನ್ನು (encroachment) ತೆರವುಗೊಳಿಸಿದರು.
ಈಗಾಗಲೇ ಬೆಂಗಳೂರು ಜೋಡಿ ರಸ್ತೆ ಮತ್ತು ಚೇಳೂರು ರಸ್ತೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಿದ್ದು ಬುಧವಾರ ಬೆಳಗ್ಗೆ, ಎಂ.ಜಿ.ರಸ್ತೆಯ ಬಾಗೇಪಲ್ಲಿ ವೃತ್ತದಿಂದ ಎರಡು ಬದಿಯ ಪಾದಚಾರಿ ಮಾರ್ಗದ ಒತ್ತುವರಿಯನ್ನು 3 ಯಂತ್ರಗಳ ಸಹಾಯದಿಂದ ತೆರವುಗೊಳಿಸಲಾಯಿತು. ಕೆಲ ಕಟ್ಟಡಗಳು ನ್ಯಾಯಾಲಯದಲ್ಲಿ ಪ್ರಸ್ತುತವಿರುವ ಕಾರಣ, ಅವುಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ನ್ಯಾಯಾಲಯದ ತೀರ್ಮಾನದ ನಂತರ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಹೆದ್ದಾರಿ ಎಇಇ ಮಲ್ಲಿಕಾರ್ಜುನ್ ಹೇಳಿದರು.
ಅವರು ಮಾತನಾಡಿ, “ನಾವು ಹೀಗೇ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದೆವು. ಬಹುತೇಕ ಅಂಗಡಿ ಮಾಲೀಕರು ಸ್ವಯಂ ಕ್ರಮವನ್ನು ಅನುಸರಿಸಿ ಸಹಕಾರ ನೀಡಿದ್ದಾರೆ. ಇದೇ ರಸ್ತೆಯಲ್ಲಿ ಇತ್ತೀಚೆಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಮುಖ್ಯ ಉದ್ದೇಶ ನಾಗರಿಕರ ಸುರಕ್ಷತೆ ಮತ್ತು ನಗರ ಅಭಿವೃದ್ಧಿಯಾಗಿದೆ,” ಎಂದರು.
ಜಿಲ್ಲಾ ಎಸ್.ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್.ಪಿ ಖಾಸೀಂ, ಡಿವೈಎಎಸ್ಪಿ ಮುರಳೀಧರ್, ಪೌರಾಯುಕ್ತ ಜಿ.ಎನ್.ಚಲಪತಿ ಉಪಸ್ಥಿತರಿದ್ದರು.