Chintamani : ಚಿಂತಾಮಣಿ ನಗರದ ವಾರ್ಡ್ ನಂಬರ್ 23ರ ದೊಡ್ಡಪೇಟೆಯ ಗಾಣಿಗೆ ಬೀದಿಯಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಒಂದು ಮನೆಯ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಇದರ ಜೊತೆಗೆ, ಬೀದಿಯಲ್ಲಿದ್ದ ಐದಕ್ಕೂ ಹೆಚ್ಚು ಮನೆಗಳ ಎಲೆಕ್ಟ್ರಾನಿಕ್ ವಸ್ತುಗಳಿಗೂ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮಧ್ಯಾಹ್ನ ಸುಮಾರು 5 ಗಂಟೆಯ ಸುಮಾರಿಗೆ ಲೋಕೇಶ್ ಅವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಹೆಚ್ಚಿನ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯಲಾಯಿತು.
ಈ ಘಟನೆಯ ಕುರಿತು ಮಾತನಾಡಿದ ಮನೆಯ ಮಾಲೀಕ ಲೋಕೇಶ್, “ನಮ್ಮ ಮನೆ ಮಾತ್ರವಲ್ಲದೆ, ಬೀದಿಯ ಸುಮಾರು ಐದಕ್ಕಿಂತ ಹೆಚ್ಚು ಮನೆಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ಬಾಡಿಗೆ ಮನೆಯಲ್ಲಿರುವ ಕೃಷ್ಣ ಸಿಂಗ್ ಅವರಿಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ನಷ್ಟವಾಗಿದೆ” ಎಂದು ಅಳಲು ತೋಡಿಕೊಂಡರು. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
