Chintamani : ಚಿಂತಾಮಣಿ ತಾಲ್ಲೂಕು ಆರೋಗ್ಯ ಇಲಾಖೆಯಿಂದ ಶನಿವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ (Government Hospital) ವಿಶ್ವ ಕ್ಯಾನ್ಸರ್ ದಿನಾಚರಣೆ (World Cancer Day) ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ” ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ವಾರ ಕಾಲ ’ಕ್ಯಾನ್ಸರ್ ಸಪ್ತಾಹ’ ಆಯೋಜಿಸಲಾಗಿದೆ. ಮಾರಕ ಕಾಯಿಲೆಯಾಗಿರುವ ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಖಂಡಿತ ಗುಣವಾಗಲಿದೆ. ತಡವಾಗಿ ಗುರುತಿಸಿದರೆ ಕಾಯಿಲೆ ಶರೀರದ ವಿವಿಧ ಭಾಗಗಳಿಗೆ ಆವರಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆದರೂ ಗುಣಮುಖರಾಗುವುದು ಕಷ್ಟ. ಕ್ಯಾನ್ಸರ್‌ನಲ್ಲಿ ಮುಖ್ಯವಾಗಿ ಬಾಯಿ, ಸ್ತನ, ಗರ್ಭಕೋಶ, ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ನಾಲ್ಕು ವಿಧಗಳಿವೆ. ಇವು ಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಬಹುದು. ಮತ್ತೊಂದು ರಕ್ತ ಕ್ಯಾನ್ಸರ್ ಬಾಧಿಸುತ್ತದೆ. ಇದನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಬಹಳ ಕಷ್ಟ” ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಸ್ವಾತಿ, ನಗರಸಭೆ ಸದಸ್ಯ ಟಿ.ಎಸ್.ನಾಗರಾಜ್, ಡಾ.ಜಯರಾಂ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.