Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸೋಮವಾರ ಎಲ್ಲೆಡೆ ಯೇಸು ಕ್ರಿಸ್ತನ ಜನ್ಮದಿನದ (Christmas) ಸಡಗರ ಮನೆ ಮಾಡಿತ್ತು. ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ನ ಕ್ಯಾರಲ್ಸ್ ಅನುರಣಿಸಿದವು. ಕ್ರಿಶ್ಚಿಯನ್ ಸಮುದಾಯದವರು ಶ್ರದ್ಧಾಭಕ್ತಿಯಿಂದ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಚರ್ಚ್ ಗಳಲ್ಲಿ ಯೇಸು ಕ್ರಿಸ್ತನನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನಲ್ಲಿ ಕ್ಯಾಥೋಲಿಕ ಪಂಥದವರು ಮತ್ತು ಸಿ.ಎಸ್.ಐ (Church of South India) ಚರ್ಚ್‌ನಲ್ಲಿ ಪ್ರಾಟೆಸ್ಟೆಂಟ್ ಪಂಥದವರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಕ್ರಿಸ್‌ಮಸ್ ಹಬ್ಬ ಆಚರಿಸಿದರು.
ಚೇಳೂರು :.
ಚೇಳೂರು ಪಟ್ಟಣದ ಶಾಂತಿನಗರದ ಬೇತಲ್ ಚರ್ಚ್ ಹಾಗೂ ವಿವಿಧ ಬಡಾವಣೆಯ ಚರ್ಚ್‌ಗಳಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಚಿಂತಾಮಣಿ :
ಚಿಂತಾಮಣಿ ನಗರದ ಎನ್.ಆರ್.ಬಡಾವಣೆಯ ಪ್ರೊಟೆಸ್ಟಂಟ್ ಚರ್ಚ್, ಶಿಡ್ಲಘಟ್ಟ ವೃತ್ತದಲ್ಲಿರುವ ಕ್ಯಾಥೋಲಿಕ್ ಚರ್ಚ್, ಕೋಲಾರ ರಸ್ತೆಯಲ್ಲಿರುವ ಚರ್ಚ್, ಚೇಳೂರು ರಸ್ತೆಯಲ್ಲಿರುವ ಚರ್ಚ್ ಸೇರಿದಂತೆ ಎಲ್ಲಾ ಚರ್ಚ್‌ಗಳಲ್ಲೂ ವಿಶೇಷ ದೀಪಗಳಿಂದ ಅಲಂಕಾರ ಮಾಡಿದ್ದು, ಕಣ್ಮನ ಸೆಳೆಯುತ್ತಿದ್ದವು.
ಶಿಡ್ಲಘಟ್ಟ:
ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮಾ ಚರ್ಚ್, ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಹಾಗೂ ತಾಲ್ಲೂಕಿನ ವಿವಿಧೆಡೆಗಳಲ್ಲಿರುವ ಚರ್ಚ್‌ಗಳನ್ನು ಸೋಮವಾರ ಕ್ರಿಸ್‌ಮಸ್ ಪ್ರಯುಕ್ತ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಬಾಗೇಪಲ್ಲಿ :
ಬಾಗೇಪಲ್ಲಿ ಪಟ್ಟಣದ ಹೊಸಜೀವನ ನಿಲಯ ಚರ್ಚ್ ಸೇರಿದಂತೆ ಇತರ ಚರ್ಚ್ ಹಾಗೂ ವಿವಿಧ ಗ್ರಾಮಗಳ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಚರ್ಚ್ ಮುಂದೆ ಚಪ್ಪರ ಹಾಕಿ ಒಳಭಾಗದಲ್ಲಿ ನಿರ್ಮಿಸಿರುವ ಗೋದಲಿಗಳು ಗಮನ ಸೆಳೆಯಿತು. ಚರ್ಚ್‍ಗಳಲ್ಲಿ ಯೇಸು ಶಿಲುಬೆಯ ಮುಂದೆ ದೀಪಗಳನ್ನು ಹಚ್ಚಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು.