Chickballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ (Chikballapur District commissioner R Latha) ಅವರು ಮಂಗಳವಾರ ನಗರದ 11, 15, 16 ಮತ್ತು 19ನೇ ವಾರ್ಡ್ ವ್ಯಾಪ್ತಿಯ ನಂದಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎರಡು ತಿಂಗಳ ಒಳಗಾಗಿ ಎಷ್ಟು ಸಾಧ್ಯವೊ ಅಷ್ಟು ಬೇಗ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ ₹ 3 ಕೋಟಿ ಬಿಡುಗಡೆ ಆಗಿತ್ತು. ಕ್ರೀಡಾಂಗಣ ರಸ್ತೆಗೆ ₹ 70 ಲಕ್ಷ ಮತ್ತು ಚಿಕ್ಕಬಳ್ಳಾಪುರ ನಗರದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ₹ 30 ಲಕ್ಷ ಹಾಗೂ ನಂದಿ ರಸ್ತೆ ಅಭಿವೃದ್ಧಿಗೆ ₹ 1.92 ಕೋಟಿ ನಿಗದಿಪಡಿಸಲಾಗಿತ್ತು. 850 ಮೀಟರ್ ಉದ್ದದ ಸಿ.ಸಿ.ರಸ್ತೆ ಕಾಮಗಾರಿಗೆ ಟೆಂಡರ್ ಆಗಿ 6 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಅನಗತ್ಯ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಆದ್ಯತೆ ಮೇಲೆ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ₹ 3 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದರು. ನಂದಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದು ಮತ್ತು ರಸ್ತೆ ಇಕ್ಕೆಲಗಳಲ್ಲಿ ಒತ್ತುವರಿ ತೆರವು ಕಾರಣ ಕಾಮಗಾರಿ ವೇಗಕ್ಕೆ ತೊಡಕಾಗಿತ್ತು. ಒತ್ತುವರಿ ತೆರವುಗೊಳಿಸಲಾಗಿದ್ದು, ಎರಡು ತಿಂಗಳ ಒಳಗೆ ನಂದಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಪೌರಾಯುಕ್ತ ಎನ್.ಮಹಾಂತೇಶ್ ಹಾಗೂ ಅಧಿಕಾರಿಗಳು ಉಪಸ್ಥಿರರಿದ್ದರು.