Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಗಿ ನಿಯಂತ್ರಣ ಕುರಿತು ಜಾಗೃತಿ (Dengue Awareness Poster Release) ಮೂಡಿಸುವ ಕರಪತ್ರಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಿಡುಗಡೆಗೊಳಿಸಿ ಸುದ್ಧಿಗೋಷ್ಠಿ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಹೆಚ್ಚಿನ ಡೆಂಗಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ರಕ್ತ ತಪಾಸಣೆ ಕಾರ್ಯ ಜಿಲ್ಲೆಯಲ್ಲಿ ಹೆಚ್ಚಿಸಲಾಗಿದೆ. ಈವರೆಗೆ 820 ರಕ್ತ ತಪಾಸಣೆ ಮಾಡಲಾಗಿದ್ದು ಬಾಗೇಪಲ್ಲಿ ತಾಲ್ಲೂಕಿನಲ್ಲಿ 15, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 26, ಚಿಂತಾಮಣಿ 14, ಗುಡಿಬಂಡೆ 3, ಗೌರಿಬಿದನೂರು 11 ಹಾಗೂ ಶಿಡ್ಲಘಟ್ಟ 23 ಡೆಂಗಿ ಪ್ರಕರಣ ದಾಖಲಾಗಿವೆ. ಎಲ್ಲ ನೀರಿನ ತೊಟ್ಟಿ, ಡ್ರಮ್, ಬ್ಯಾರಲ್, ಏರ್ ಕೂಲರ್ ಇತ್ಯಾದಿ ವಾರಕ್ಕೊಮ್ಮೆ ತಪ್ಪದೆ ಖಾಲಿ ಮಾಡಿ, ಒಣಗಿಸಿ ಪುನಃ ನೀರು ಭರ್ತಿ ಮಾಡಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ತೊಟ್ಟಿಯಲ್ಲಿ ಕೀಟ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು” ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಜುಂಜಣ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.