
Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯ BGS ಇಂಗ್ಲಿಷ್ ಶಾಲೆ ಮತ್ತು ವೆಂಕಟೇಶ್ವರ ಪ್ರೌಢಶಾಲೆ ವತಿಯಿಂದ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಕ್ಕಳ Graduation Day (ಪದವಿ ಪ್ರಧಾನ) ಮತ್ತು “ಸ್ವಸ್ತಿ” ಮಾತಾ ಪಿತೃ ವಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಮಂಗಳನಾಥ ಸ್ವಾಮೀಜಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ, ಮನೆಯೇ ಮೊದಲ ಪಾಠಶಾಲೆ ಎಂಬ ನುಡಿಯ ಮಹತ್ವವನ್ನು ವಿವರಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ, ಗೌರವ, ಶಿಸ್ತಿನ ಬದುಕು, ಓದುಗಣಿಕೆ ಮತ್ತು ಕಲಿಕೆಯ ಆಸಕ್ತಿ ಬೆಳೆಸಲು ಪೋಷಕರು ಸೂಕ್ತ ವಾತಾವರಣ ಒದಗಿಸಬೇಕು ಎಂದು ಸಲಹೆ ನೀಡಿದರು. ಮನೆಯ ಹಾಗೂ ಸಮಾಜದ ಆಚಾರ, ವಿಚಾರಗಳು ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರಲು ಸಾಧ್ಯ ಎಂದು ಹೇಳಿದ್ದಾರೆ.
ಪೋಷಕರು ಮಕ್ಕಳಿಗೆ ಹಿತಕರ ಪರಿಕರಗಳನ್ನಷ್ಟೇ ಪರಿಚಯಿಸಬೇಕು. ದೂರದರ್ಶನ, ಮೊಬೈಲ್ ಬಳಕೆ ಮಿತಿಗೊಳಿಸಿ, ಜ್ಞಾನ ವೃದ್ಧಿಗೆ ಪೂರಕವಾಗುವಂಥ ವಿಷಯಗಳಿಗೆ ಮಾತ್ರ ಮಕ್ಕಳನ್ನು ಒಲಿಸಬೇಕು ಎಂದು ತಿಳಿಸಿದರು.
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಾಮಲಾ ಮಾತನಾಡಿ, ತಾಯಿ-ತಂದೆಗಿಂತ ಮಿಗಿಲಾದ ದೇವರಿಲ್ಲ ಎಂದು ಶ್ಲಾಘಿಸಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಹನೆಯ ಪಾಠ ಕಲಿಸಲು ಪೋಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಮಸ್ಕಾರ ಮತ್ತು ಪುಷ್ಪ ಸಮರ್ಪಣೆಯೊಂದಿಗೆ ಮಾತಾ ಪಿತೃ ವಂದನೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪುಟಾಣಿ ಮಕ್ಕಳು ತಾಯಂದಿರು ಮತ್ತು ತಂದೆಯ ಪಾದ ತೊಳೆದು ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದರು. ಬುದ್ದಿಮಂತಿಕೆ, ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವ್ಯಾಸಂಗ ಮುಗಿಸಿದ ಮಕ್ಕಳಿಗೆ ಸ್ವಾಮೀಜಿಯವರಿಂದ ಪ್ರಮಾಣಪತ್ರ ವಿತರಿಸಲಾಯಿತು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕೆ.ಮಹದೇವ್, ಮುಖಂಡರಾದ ಡಾ.ಧನಂಜಯರೆಡ್ಡಿ, ಡಿ.ಎಸ್.ಎನ್.ರಾಜಣ್ಣ ಸೇರಿ ಅನೇಕರು ಹಾಜರಿದ್ದು, ಮಕ್ಕಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿದರು.