Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ನೇತೃತ್ವದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಯ ಪೂರ್ವಭಾವಿ ಸಿದ್ದತಾ (District Government Employees Sports Preliminary Meeting) ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು “ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಬೇಕಾದರೆ ಯಾವುದಾದರೂ ಒಂದು ಕ್ರೀಡೆ, ಸಂಸ್ಕೃತಿಕ ಸ್ಪರ್ಧೆ, ಯೋಗ, ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಉತ್ತಮ. ಆ ನಿಟ್ಟಿನಲ್ಲಿ ಸರ್ಕಾರಿ ಆಡಳಿತ ವರ್ಗದವರಿಗೆ ಅನುಕೂಲವಾಗಲು ಕ್ರೀಡಾಕೂಟ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಿಂದಿನಿಂದಲು ನಡೆಸಿಕೊಂಡು ಬರುತ್ತಿರುವುದು ಪರಂಪರೆಯಾಗಿದ್ದು ಜೂನ್ 19 ಮತ್ತು ಜೂನ್ 20 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ನೌಕರರು, ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕು” ಎಂದು ತಿಳಿಸಿದರು. ತೀರ್ಪುಗಾರರ ನಿಯೋಜನೆ, ಕ್ರೀಡಾಂಗಣ ಸಿದ್ದತೆ, ಕ್ರೀಡಾ ಪರಿಕರಗಳು ಪೂರೈಕೆ, ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ಭದ್ರತೆ, ಆಂಬುಲೆನ್ಸ್ ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಕ್ರೀಡಾಕೂಟವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಬಸವರಾಜ್ ಮತ್ತು ಶ್ರೀನಿವಾಸ್, ಖಜಾಂಚಿ ದಿನೇಶ್, ಕ್ರೀಡಾ ಕಾರ್ಯದರ್ಶಿ ಶಿವಕುಮಾರ್, ಗುಡಿಬಂಡೆ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಬಾಗೇಪಲ್ಲಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸತ್ಯನಾರಾಯಣರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.