Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಾರ್ಚ್ 4 ಮತ್ತು 5 ರಂದು ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ (Chikkaballapur District Literature festival) ನಡೆಯಲಿದೆ.
ಈ ಕುರಿತು ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ” ಕುವೆಂಪು ಅವರ ವಿಶ್ವ ಮಾನವ ಸಂದೇಶಗಳನ್ನು ಜಿಲ್ಲೆಯಲ್ಲಿ ಉತ್ತೇಜಿಸುವ ರೀತಿಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕಾಗಿದ್ದು ಕನ್ನಡ ಸಾಹಿತ್ಯದ ತಿರುಳನ್ನು, ವಿಚಾರಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಮಾರ್ಚ್ 4 ರಂದು ಹಲವು ಕಲಾತಂಡಗಳು ಪಲ್ಲಕ್ಕಿಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಲಾಗುವುದು. ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು, ಕವಿಗೋಷ್ಠಿಗಳು, ವಿವಿಧ ಕಮ್ಮಟಗಳು ಹಾಗೂ ನಾಟಕ ಪ್ರದರ್ಶನಗಳನ್ನು ಏರ್ಪಡಿಸಬೇಕಿದ್ದು ಈಗಾಗಲೇ ಸಮ್ಮೇಳನದ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ” ಎಂದರು.
ಸಭೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಜಿ. ಸಂತೋಷ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಮೃತ್ ಕುಮಾರ್, ಕೋಶಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯಕಾರಿ ಸಮಿತಿ ಸದಸ್ಯ ಎನ್.ಚಂದ್ರಶೇಖರ್, ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಪದಾಧಿಕಾರಿಗಳಾದ ರವಿಕುಮಾರ್, ಸತೀಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.