Sidlaghatta: ಶಿಡ್ಲಘಟ್ಟ ನಗರದ ಸರ್ಕಾರೀ ಬಸ್ ನಿಲ್ದಾಣದಲ್ಲಿ (KSRTC) ಬಹು ದಿನಗಳಿಂದ ಸಾರಿಗೆ ಬಸ್ ವ್ಯವಸ್ಥೆ ಅಭಾವ ಎದ್ದು ಕಾಣುತ್ತಿದ್ದು, ಬೆಂಗಳೂರು ಸೇರಿ ಇತರೆ ಊರುಗಳಿಗೆ ಉದ್ಯೋಗ ಮತ್ತು ಶಾಲೆಗಳಿಗೆ ತಲುಪಲು ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಕಷ್ಟ ಅನುಭವಿಸುವಂತಾಗಿದೆ.
ಮುಂಜಾನೆಯಿಂದ ಬೇರೆ ಊರುಗಳಿಗೆ ಹೋಗಲು ಬಸ್ ಗಾಗಿ ಕಾದು ಕುಳಿತ ಹಿರಿಯ ನಾಗರೀಕರು, ಕೆಲಸಕ್ಕೆ ಹೋಗಲು ಸಮಯಕ್ಕೆ ಸರಿಯಾಗಿ ಬಾರದ ಬಸ್ ಬಗ್ಗೆ ಬೈದುಕೊಳ್ಳುವ ಪ್ರಯಾಣಿಕರು, ಶಾಲೆಗೆ – ಪರೀಕ್ಷೆಗಳಿಗೆ ಸಮಯಕ್ಕೆ ತಲುಪಲು ಸಾಧ್ಯವಾಗದೆ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವ ಮಕ್ಕಳು – ಇವು ಶಿಡ್ಲಘಟ್ಟ ನಗರದ ಸಾರಿಗೆ ನಿಲ್ದಾಣದ ಪ್ರತಿನಿತ್ಯದ ಚಿತ್ರಣವಾಗಿದೆ.
ಶಿಡ್ಲಘಟ್ಟ ನಗರದಿಂದ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಮಾರ್ಗಗಳಲ್ಲಿ ಹೆಚ್ಚಿನ ಜನರು ಪ್ರತಿದಿನ ಉದ್ಯೋಗ ಮತ್ತು ಶಾಲೆಗೆ ಪ್ರಯಾಣಿಸುತ್ತಿದ್ದಾರೆ, ಆದರೆ ಬಹಳ ದಿನಗಳಿಂದ ಬೆಳಿಗ್ಗೆಯ ಸಮಯದಲ್ಲಿ ಬಸ್ ಗಳು ಸಮಯಕ್ಕೆ ಸರಿಯಾಗಿ ಬಾರದೆ ಗಂಟೆಗಟ್ಟಕೆ ಪ್ರಯಾಣಿಕರು ಕಾಯುವುದಷ್ಟೇ ಅಲ್ಲದೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಬಸ್ ಗಳ ಸಂಚಾರ ರದ್ದಾಗುತ್ತಿರುವುದು ಪ್ರಯಾಣಿಕರು ಪರದಾಡುವಂತೆ ಮಾಡಿದೆ. ಇನ್ನು ಗಂಟೆಗಳು ಕಾದು ಸಿಗುವ ಯಾವುದೊ ಒಂದು ಬಸ್ ಗೆ ತುಂಬಿಕೊಂಡು ಜನ ಫುಟ್ ಬೋರ್ಡ್ ಮೇಲೆ ಜೋತು ಬಿದ್ದು ಪ್ರಯಾಣಿಸುವುದು ಪ್ರಯಾಣಿಕರ ಪ್ರಾಣಾಪಾಯವನ್ನೂ ಸಾರಿ ಹೇಳುತ್ತಿದೆ.
ಮುಂಜಾನೆ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದೇ ಈಗ ವಿರಳವಾಗುತ್ತಿದೆ. 7 ರಿಂದ 9 ಗಂಟೆಯಾದರೂ ಬಸ್ ಬರುವುದಿಲ್ಲ, ಅಧಿಕಾರಿಗಳನ್ನು ಕೇಳಿದರೆ “ಡಿಪೋ ನಲ್ಲಿ ಬಸ್ ಇಲ್ಲ”, “ಬಸ್ ಕ್ಯಾನ್ಸಲ್ ಆಗಿದೆ”, “ಡ್ರೈವರ್ ಕಂಡಕ್ಟರ್ ಇದಾರೆ, ಬಸ್ ಇಲ್ಲ”, “ಡಿಪೋ ಗೆ ತಿಳಿಸಿದ್ದೇವೆ ಬರುತ್ತದೆ, ವೇಟ್ ಮಾಡಿ” ಎಂದು ಇಲ್ಲ ಸಲ್ಲದ ಕಾರಣಗಳನ್ನು ಹೇಳುತ್ತಾರೆ ಎನ್ನುತ್ತಾರೆ ಪ್ರಯಾಣಿಕರು.
ಇನ್ನು ವಿದ್ಯಾರ್ಥಿಗಳ ಕಷ್ಟ ಹೇಳತೀರದ್ದು. ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೆ ಶಾಲೆಯಲ್ಲಿ ಪ್ರತಿದಿನ ಬೈಗುಳನ್ನು ಕೇಳುವುತ್ತೇವೆ. ಕೆಲವು ದಿನಗಳಿಂದ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದೆ, ಆದರೆ ಸಮಯಕ್ಕೆ ಸರಿಯಾಗಿ ಇಲ್ಲಿ ಬಸ್ ಬರುತ್ತಿಲ್ಲ. ಪರಿಕ್ಷೆಯನ್ನು ಆತಂಕದಲ್ಲಿ ಹೋಗಿ ಬರಿಯಬೇಕು, ಬಹಳ ಕಷ್ಟಕರವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ಹೇಳುತ್ತಾರೆ.
ಇನ್ನು ಅಧಿಕಾರಿಗಳ ಬಳಿ ಯಾವುದೇ ಸರಿಯಾದ ಮಾಹಿತಿ ಸಿಗುವುದಿಲ್ಲ, ಎಷ್ಟು ಹೊತ್ತಿಗೆ ಬಸ್ ಬರುತ್ತದೆ, ಯಾವುದೇ ಸೂಚನೆ ಇಲ್ಲದೆ ಬಸ್ ಗಳು ಏಕೆ ರದ್ದಾಗುತ್ತಿದೆ, ಎಲ್ಲದಕ್ಕೂ “ಗೊತ್ತಿಲ್ಲ” ಎಂಬ ಹಾರಿಕೆಯ ಉತ್ತರ ಮಾತ್ರ ಸಿಗುತ್ತದೆ.
ಈ ಸಮಸ್ಯೆ ಇತ್ತೀಚಿನದ್ದಲ್ಲ, ಬಹುದಿನಗಳಿಂದ ಪ್ರಯಾಣಿಕರು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟ ಅನುಭವಿಸುತ್ತಿರುವುದು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಎಷ್ಟು ಬಾರಿ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಇನ್ನು ೧೫ ದಿನಗಳಲ್ಲಿ ಸರಿ ಮಾಡುತ್ತೇವೆ, ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸುತ್ತೇವೆ ಎಂದಿದ್ದರು. ಈಗ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವರ ಜವಾಬ್ದಾರಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಜನರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ.