Bashettahalli, Sidlaghatta : ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಬ್ರ್ಯಾಂಡ್ ಅಡಿ ಮಾರಾಟ ಮಾಡುವುದು, ಸಂಸ್ಕರಣೆ ಘಟಕ ಸ್ಥಾಪಿಸುವುದು ಹಾಗೂ ನಮಗೆ ಅತ್ಯಗತ್ಯವಾದ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಹೋಲ್‌ಸೇಲ್ ದರದಲ್ಲಿ ನೇರವಾಗಿ ತಯಾರಕರಿಂದಲೇ ಖರೀದಿಸುವ ಅವಕಾಶಗಳು ನಮ್ಮ ಮುಂದಿವೆ ಎಂದು ಶ್ರೀ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವಿಜಯಕುಮಾರ್ ಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ಎಫ್.ಪಿ.ಒ ಕಚೇರಿಯಲ್ಲಿ ಶುಕ್ರವಾರ ಶ್ರೀ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಕಂಪನಿಗೆ 883 ಷೇರುದಾರರು ನೋಂದಾವಣಿಯಾಗಿದ್ದು 9 ಲಕ್ಷ ಷೇರು ಹಣ ಸಂಸ್ಥೆಯ ವಹಿವಾಟಿಗೆ ಅನುಕೂಲವಾಗಿದೆ. 4 ಸಾವಯುವ ಕೃಷಿ ಹಾಗು ಆಧುನಿಕ ಕೃಷಿ ಪದ್ದತಿಗಳ ತರಬೇತಿಗಳನ್ನ ನಾವು ಕಳೆದ ಸಾಲಿನಲ್ಲಿ ಆಯೋಜಿಸಿರುವುದು ರೈತರಿಗೆ ಉಪಯೋಗವಾಗಿದೆ. ರೈತರಿಗೆ ಕೃಷಿ ಶೈಕ್ಷಣಿಕ ಪ್ರವಾಸ ಕೂಡ ಆಯೋಜಿಸಲಾಗಿತ್ತು. ರೈತರ ನೇರಳೆ ಹಣ್ಣು ಬ್ರಾಂಡ್ ಹೆಸರಿನಲ್ಲಿ ನೇರ ಗ್ರಾಹಕರಿಗೆ ಮಾರಾಟ ಮಾಡಿ ಲಾಭ ಗಳಿಸುವಂತಾಯಿತು. 45 ರೈತ ಆಸಕ್ತ ಗುಂಪುಗಳ ರಚನೆ ಮಾಡಿದ್ದಲ್ಲದೆ,. ಸಾವಯವ ಹಾಗು ರಸಗೊಬ್ಬರ ಮಾರಾಟ ಕೂಡ ಮಾಡಿದ್ದೆವು ಎಂದು ಕಳೆದ ವರ್ಷದ ಪ್ರಗತಿಯನ್ನು ವಿವರಿಸಿದರು.
ಮುಂದಿನ ವರ್ಷದಲ್ಲಿ ಕೀಟನಾಶಕ ಹಾಗು ಬಿತ್ತನೆ ಬೀಜ ಮಾರಾಟ ಮಾಡುವುದು, ಹೈನುಗಾರಿಕೆ ಸಂಬಂದಿತ ಪರಿಕರಗಳ ಮಾರಾಟ ಮತ್ತು ರೈತರ ತರಕಾರಿ ಮಾರಾಟಕ್ಕೆ ಸಹಕಾರಿ ಯೋಜನೆ ರೂಪಿಸುವುದಾಗಿ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವೈದಿಕ ಸಂಸ್ಥೆಯ ಸುನಿತಾ, ಬಿ.ಶಿವಕುಮಾರ್, ದ್ಯಾವಪ್ಪ, ಅಮೂರು ತಿಮ್ಮನಹಳ್ಳಿ ಶಿವಣ್ಣ, ಬಶೆಟ್ಟಹಳ್ಳಿ ಮಧು, ಅಂಬರೀಷ್, ಧನಮಿತ್ತೇನಹಳ್ಳಿ ರಾಮರೆಡ್ಡಿ, ಗೌಡನಹಳ್ಳಿ ವೆಂಕಟರೆಡ್ಡಿ, ಜೀವಿಕ ಮುನಿಯಪ್ಪ, ಟಿ.ವಿ. ಬಚ್ಚರೆಡ್ಡಿ, ಆರ್. ನಾಗರಾಜರೆಡ್ಡಿ, ಕೆ.ಸಿ.ಕೃಷ್ಣಪ್ಪ, ನಾರಾಯಣಸ್ವಾಮಿ, ಬೈರೇಗೌಡ, ವೆಂಕಟೇಶ್ ಹಾಜರಿದ್ದರು.