Kachahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಾಜಿ ಪ್ರಧಾನಮಂತ್ರಿ ಚೌದರಿ ಚರಣ್ ಸಿಂಗ್ ರವರ ಜನ್ಮದಿನದ ಸ್ಮರಣಾರ್ಥವಾಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಯಿತು.
ಕೃಷಿ ಕಾಯಕದಲ್ಲಿ ತೊಡಗಿರುವ ಗ್ರಾಮದ ಕೆ.ಎಸ್.ಮುನಿಯಪ್ಪ, ರತ್ನಮ್ಮ, ಕೃಷ್ಣಪ್ಪ, ನಾರಾಯಣಮ್ಮ, ನಾರಾಯಣಸ್ವಾಮಿ, ಮುನಿತಾಯಮ್ಮ, ಚನ್ನಪ್ಪ, ರುಕ್ಮಿಣಿಯಮ್ಮ, ಮುನಿರೆಡ್ಡಿ, ಸುಶೀಲಮ್ಮ ಎಂಬ ಹಿರಿಯರಾದ ಐದು ಜೋಡಿ ರೈತ ದಂಪತಿಗಳನ್ನು ಶಾಲೆಯ ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಕ ವಿ.ಚಂದ್ರಶೇಖರ್ ಮಾತನಾಡಿ, ರೈತರು ದೇಶದ ಬೆನ್ನೆಲುಬು, ರೈತರನ್ನು ರಾಷ್ಟ್ರಕವಿ ಕುವೆಂಪುರವರು ನೇಗಿಲಯೋಗಿ ಎಂದು ಹಾಡಿ ಹೊಗಳಿದ್ದಾರೆ. ನಾವು ತಿನ್ನುವ ಊಟದ ಪ್ರತಿ ತುತ್ತಿನ ಹಿಂದೆ ರೈತರ ಶ್ರಮವಿರುತ್ತದೆ. ಪ್ರತಿ ದಿನ ಊಟ ಮಾಡುವಾಗ ರೈತರನ್ನು ನೆನೆಯಬೇಕು ಎಂದರು.
ಗ್ರಾಮಸ್ಥ ರಾಜಣ್ಣ ಮಾತನಾಡಿ, ರೈತರ ದಿನದಂದು ರೈತರನ್ನು ಸನ್ಮಾನಿಸುತ್ತಿರುವುದು ಸ್ವಾಗತಾರ್ಹ. ರೈತರ ಜೀವನವನ್ನು ಈಗಿನ ಮಕ್ಕಳು ಅರಿಯಬೇಕು. ರೈತರು ದುಡಿದು ಬೆಳೆದು ದೇಶದ ಜನರ ಹಸಿವನ್ನು ನೀಗಿಸುತ್ತಾರೆ. ನಾವು ತಿನ್ನುವ ಪ್ರತಿ ತುತ್ತಿನ ಪ್ರತಿ ಅಗುಳು ರೈತರ ಬೆವರಿನ ಫಲ ಎಂದರು.
ಮಕ್ಕಳು ರೈತಗೀತೆಯನ್ನು ಹಾಡುವ ಮೂಲಕ ರೈತ ದಂಪತಿಗಳಿಗೆ ಅಭಿನಂದನೆ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಮಾ, ಮುಖ್ಯ ಶಿಕ್ಷಕಿ ಆರ್. ರಾಜೇಶ್ವರಿ, ಗ್ರಾಮಸ್ಥರಾದ ಗೀತಾ , ಮೀನಾಕ್ಷಿ, ಎಸ್.ಡಿ.ಎಂ.ಸಿ ಸದಸ್ಯರಾದ ರಾಜೇಶ್ವರಿ , ಶೇಖರ್ , ನಾಗಮಣಿ , ಅಡುಗೆ ಸಹಾಯಕಿ ಗಾಯತ್ರಿ , ಅಂಗನವಾಡಿ ಸಹಾಯಕಿ ಗೌರಮ್ಮ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು.