Gudibande : ಗುಡಿಬಂಡೆ ತಾಲ್ಲೂಕು ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನಸೌಧ ಚಲೊ ಹೋರಾಟಕ್ಕೆ ಚಾಲನೆ ನೀಡಿ ಕೃಷಿ ಸಂಬಂಧಿತ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ರಾಮನಾಥ್ ಮಾತನಾಡಿ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಪ್ರೀಪೇಡ್ ಮೀಟರ್ ಅಳವಡಿಕೆ ಸೇರಿ ಅನೇಕ ಕಾಯ್ದೆಗಳು ರೈತ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಹಲವು ಬಾರಿ ಪ್ರತಿಭಟನೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀದಿದ್ದರೂ ಸರ್ಕಾರಗಳು ಮೊಂಡುತನ ಪ್ರದರ್ಶಿಸುತ್ತಿವೆ. ಆದ್ದರಿಂದ ಈ ವಿಧಾನಸೌಧ ಚಲೊ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ರೈತ ಸಂಘದ ಗುಡಿಬಂಡೆ ತಾಲ್ಲೂಕು ಅಧ್ಯಕ್ಷ ಮುರಳಿ ಮಾತನಾಡಿ, ರೈತರ ಹೋರಾಟ ಎಂದರೆ ಸರ್ಕಾರ ಉದಾಸೀನತೆ ತೋರುತ್ತಿದೆ. ಸುಮ್ಮನೆ ರೈತರನ್ನು ಕೆಣಕುವ ಕೆಲಸ ಮಾಡಬಾರದು. ರೈತರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು, ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕಠಿಣ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಗೌರಿಬಿದನೂರು ತಾಲೂಕಿನ ರೈತ ಸಂಘದ ಅಧ್ಯಕ್ಷ ಮಾಳಪ್ಪ, ಸೊಮುಶೇಖರ್, ವೆಂಕಟರೋಣಪ್ಪ, ಬಲರಾಮಪ್ಪ, ಚೌಡರೆಡ್ಡಿ, ರವೀಂದ್ರರೆಡ್ಡಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.