Belluti, Sidlaghatta : ಹಸಿರು ಮೇವನ್ನು ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 3 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವನ್ನಾಗಿ ಕೋಚಿಮುಲ್‌ನಿಂದ ನೀಡಲಾಗುವುದು ಎಂದು ಕೋಚಿಮುಲ್ ಹಾಗೂ ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್‌ರಾಮಯ್ಯ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
ಹಾಲು ನೀಡುವ ಸೀಮೆ ಹಸುಗಳಿಗೆ ಪಶು ಆಹಾರವನ್ನು ನೀಡಿದರೆ ಹೆಚ್ಚಿನ ಹಾಲು ನೀಡುತ್ತದೆ ಎನ್ನುವ ಭಾವನೆಯಿಂದ ಬಹಳಷ್ಟು ರೈತರು ಹಸಿ ಮೇವಿಗಿಂತಲೂ ಪಶು ಆಹಾರವನ್ನೆ ಹೆಚ್ಚು ನೀಡುವುದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂದರು.
ಹಸಿ ಮೇವು ನೀಡಿದರೆ ನಿರೀಕ್ಷಿಸಿದಷ್ಟು ಹಾಲನ್ನು ನೀಡುತ್ತದೆ. ಹಾಗಾಗಿ ಪಶು ಆಹಾರವನ್ನು ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹಸಿ ಮೇವನ್ನು ನೀಡುವಂತೆ ಅವರು ರೈತರಲ್ಲಿ ಕೋರಿದರು.
ಗ್ರಾಮದಲ್ಲಿನ ಹೈನುಗಾರರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಳ್ಳೂಟಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಮುನೇಗೌಡ, ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್, ಮುಖಂಡ ಎಸ್.ವೆಂಕಟೇಶ್, ಗುತ್ತಿಗೆದಾರ ಚಂದ್ರಪ್ಪ, ರೈತ ಸಂಘದ ಮುನಿಕೆಂಪಣ್ಣ, ಮೇಲ್ವಿಚಾರಕಿ ಗುಲಾಬ್‌ಜಾನ್, ಕಾರ್ಯನಿರ್ವಾಹಕ ಬಿ.ಎಂ.ಶ್ರೀನಾಥ್ ಸೇರಿದಂತೆ ಎಲ್ಲ ನಿರ್ದೇಶಕರು, ಹಾಲು ಉತ್ಪಾದಕರು ಹಾಜರಿದ್ದರು.