
Sidlaghatta : ನಗರದ ಯೂನಿಟಿ ಸಿಲ್ ಸಿಲಾ ಫೌಂಡೇಶನ್ ಮತ್ತು ಯೂನಿಟಿ ಸಿಲ್ ಸಿಲಾ ವೆಲ್ಫೇರ್ ಟ್ರಸ್ಟ್ ವತಿಯಿಂದ, ಆಕಾಶ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳವಾರ ನರಗಳ ದೌರ್ಬಲ್ಯಕ್ಕೆ ವಿಶೇಷ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ನಗರದ ಕೋಟೆ ವೃತ್ತದ ನಗರಸಭೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಯೂನಿಟಿ ಸಿಲ್‌ಸಿಲಾ ಟ್ರಸ್ಟ್‌ನ ಅಧ್ಯಕ್ಷ ಅಸದ್ ಮಾತನಾಡಿ, ನರಗಳ, ಮೆದುಳಿನ ಹಾಗು ಫಿಟ್ಸ್, ಲಕ್ವಾ ಇತ್ಯಾದಿ ನರಗಳ ದೌರ್ಬಲ್ಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿರುವ ರೋಗಿಗಳಿಗೆ ಆಕಾಶ್ ಆಸ್ಪತ್ರೆಯ ಪ್ರಸಿದ್ದ ನುರಿತ ನರಗಳ ತಜ್ಞ ವೈದ್ಯರಿಂದ ಸಮಾಲೋಚನೆ ಹಾಗು ಚಿಕಿತ್ಸೆ ನೀಡಲಾಗುತ್ತಿದೆ.
ಈ ಖಾಯಿಲೆಗೆ ಸಂಬಂಧಿಸಿದ ರೋಗಿಗಳಿಗೆ ಈ ಶಿಬಿರದಲ್ಲಿ ಚಿಕಿತ್ಸೆಗೆ ತಗಲುವ ಖರ್ಚು, ಸ್ಕ್ಯಾನಿಂಗ್, ಔಷಧಿ ಎಲ್ಲವೂ ಉಚಿತವಾಗಿರುತ್ತದೆ. ಒಂದು ವೇಳೆ ಸಿ.ಟಿ. ಸ್ಕ್ಯಾನಿಂಗ್ ಅಥವಾ ಎಮ್.ಆರ್.ಐ ಸ್ಕ್ಯಾನಿಂಗ್ ಅವಶ್ಯವಿದ್ದರೆ ಅದನ್ನೂ ಸಹ 50 ರಿಂದ 70% ವರೆಗೂ ರಿಯಾಯಿತಿ ದರದಲ್ಲಿ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ, ಶಸ್ತ್ರ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ತಪಾಸಣೆ ನಡೆಸಿ ಉಚಿತವಾಗಿ ಔಷದಿಗಳನ್ನು ನೀಡಲಾಯಿತು.
ಶಿಬಿರದಲ್ಲಿ ಯೂನಿಟಿ ಸಿಲ್ ಸಿಲಾ ಟ್ರಸ್ಟ್ ನ ಅಧ್ಯಕ್ಷ ಅಸದ್, ಉಪಾದ್ಯಕ್ಷ ಅಕ್ರಂಪಾಷ, ಸದಸ್ಯರಾದ ಇಂತಿಯಾಜ್, ಆಕಾಶ್ ಆಸ್ಪತ್ರೆಯ ವೈದ್ಯರಾದ ಡಾ.ಸಂದೇಶ್, ಡಾ.ವಂದನಾ, ವ್ಯವಸ್ಥಾಪಕ ಶ್ರೀಕಾಂತ್, ರವಿ, ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.