Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಬಿಎಂವಿ ವಿದ್ಯಾಸಂಸ್ಥೆ ಮತ್ತು ರೋಟರಿ ಬೆಂಗಳೂರು ಸೆಂಟಿನಿಯಲ್ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ನವೆಂಬರ್ 14 ರ ಭಾನುವಾರ ದಂದು ಭಕ್ತರಹಳ್ಳಿ ಗ್ರಾಮದ ಬಿಎಂವಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬಿಎಂವಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಎಲ್. ಕಾಳಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶ್ರೀ ಕೃಷ್ಣದೇವರಾಯ ದಂತ ವೈದ್ಯಕೀಯ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ, ಶಾರದಾ ಕಣ್ಣಾಸ್ಪತ್ರೆ, ಶ್ರೀನಿಧಿ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳ ತಜ್ಞವೈದ್ಯರುಗಳು ಕಣ್ಣು, ಹೃದಯ, ದಂತಚಿಕಿತ್ಸೆ, ಮಹಿಳೆಯರಿಗಾಗಿ ಸರ್ವಿಕಲ್ ಮತ್ತು ಸ್ತನ ಕ್ಯಾನ್ಸರ್‌ಗಳ ಬಗ್ಗೆ ತಪಾಸಣೆ ನಡೆಸುವರು. ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಮೂಳೆ ಸವಕಳಿ ಪರೀಕ್ಷೆಯನ್ನೂ ಸಹ ನಡೆಸಲಾಗುವುದು. ಖ್ಯಾತ ಮಕ್ಕಳ ತಜ್ಞರಾದ ಡಾ. ಎಚ್.ಸಿ. ರಮೇಶ್, ಡಾ. ಪ್ರಮೋದ್ ಎನ್. ಪಟೇಲ್, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ. ರಾಮಚಂದ್ರ, ಡಾ. ಮಹಾಂತೇಶ್, ದಂತತಜ್ಞರುಗಳಾದ ಡಾ. ಮಹೇಂದ್ರ, ಡಾ. ಮುರಳಿ, ವಿಕ್ರಮಾಂಕ, ಡಾ. ವಸಿಷ್ಠ ಸುರೇಶ್ ಹಾಗೂ ಖ್ಯಾತ ಸ್ತ್ರೀ ರೋಗ ತಜ್ಞೆ ಹಾಗೂ ಮಂಡ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಕಾವ್ಯಶ್ರೀ ರಮೇಶ್ ಹಾಗೂ ರೋಟರಿ ಸಂಸ್ಥೆಯ ಹೃದಯತಜ್ಞೆ ಡಾ. ಅನುಪಮ ಕಾಕಡೆ, ಇವರುಗಳು ಈ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸುವರು. ಭಕ್ತರಹಳ್ಳಿ, ಕಾಕಚೊಕ್ಕಂಡಹಳ್ಳಿ, ತೊಟ್ಲಗಾನಹಳ್ಳಿ, ಬೆಳ್ಳೂಟಿ, ಬಸವಾಪಟ್ಟಣ ಇತ್ಯಾದಿ ಗ್ರಾಮಗಳ ಗ್ರಾಮಸ್ಥರು ಈ ಉಚಿತ ವೈದ್ಯಕೀಯ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು. ಯಾರಾದರೂ ಈಗಾಗಲೇ ತೀವ್ರ ತರದ ಕಾಯಿಲೆಯಿಂದ ನರಳುತ್ತಿದ್ದಲ್ಲಿ ತಮ್ಮಲ್ಲಿರುವ ವೈದ್ಯಕೀಯ ದಾಖಲೆಗಳೊಂದಿಗೆ ತಜ್ಞ ವೈದ್ಯರುಗಳಿಂದ ಸಲಹೆ ಪಡೆಯುವಂತೆ ಬಿಎಂವಿ ಹಾಗೂ ರೋಟರಿ ಬೆಂಗಳೂರು ಸೆಂಟಿನಿಯಲ್ ಈ ಮೂಲಕ ಮನವಿ ಮಾಡುತ್ತಿದೆ ಎಂದು ಹೇಳಿದರು.
ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಉದ್ಘಾಟಿಸುವರು. ರೋಟರಿ ಡಿಸ್ಟಿಕ್ಸ್-319 ರ ಮುಖ್ಯಸ್ಥರಾದ ರೊಟೇರಿಯನ್ ಎನ್.ಟಿ. ಸಾಗರ್ ಅವರು ಮುಖ್ಯ ಅತಿಥಿಗಳಾಗಿ ಶಿಬಿರದಲ್ಲಿ ಭಾಗವಹಿಸುವರು. ಬಿಎಂವಿ ಟ್ರಸ್ಟ್‌ನ ಅಧ್ಯಕ್ಷ ಬಿ.ವಿ. ಮುನೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷೆ ರೋಟೇರಿಯನ್ ಪದ್ಮಿನಿ ರಾಮ್ ಹಾಜರಿದ್ದರು.