Chintamani : ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಕಲಾಜೋಯಿ ಜಾನಪದ ಕಲಾ ಸಂಸ್ಥೆ ಆಯೋಜಿಸಿದ್ದ ‘ಗಡಿ ಸಾಂಸ್ಕೃತಿಕ ಉತ್ಸವ’ವನ್ನು (Gadi Samskrutika Utsava) ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ” ನಮ್ಮ ಸಮಾಜದಲ್ಲಿ ಕಲೆ, ಸಾಹಿತ್ಯ, ನಾಟಕ, ಸಂಸ್ಕೃತಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಅಂಶಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಮಾಧ್ಯಮಗಳ ಪ್ರಭಾವದಿಂದ ಕಲೆ, ಸಾಹಿತ್ಯ, ಜಾನಪದ, ನಾಟಕ, ಇತರ ಸಾಂಸ್ಕೃತಿಕ ಉತ್ಸವಗಳಲ್ಲಿ ಜನರ ಆಸಕ್ತಿ ಮತ್ತು ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ನಗರಗಳು ಮತ್ತು ಪಟ್ಟಣಗಳಲ್ಲಿ ಕೆಲವು ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಸಾರ್ವಜನಿಕರಿಂದ ಬೆಂಬಲ ಕಡಿಮೆಯಾಗಿದೆ. ಇದಲ್ಲದೆ, ಗಡಿ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳ ಕೊರತೆಯಿದೆ. ಪ್ರೋತ್ಸಾಹದ ಕೊರತೆಯಿಂದ ಪ್ರಾಚೀನ ಕಲೆಗಳು ಕ್ರಮೇಣ ಕಣ್ಮರೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಕಲಾವಿದರನ್ನು ಕಡೆಗಣಿಸಲಾಗುತ್ತಿದ್ದು, ಇದರಿಂದ ಅನೇಕರು ಪರ್ಯಾಯ ವೃತ್ತಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಜಾನಪದ ಕಲಾವಿದ ಜಿ.ಮುನಿರೆಡ್ಡಿ ವಿಷಾದಿಸಿದರು. ಸರಕಾರ ಹಾಗೂ ಸಮಾಜ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಭಾಗ್ಯಲಕ್ಷ್ಮಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ವೀರಗಾಸೆ ಕುಣಿತ, ಭದ್ರಕಾಳಿ ನೃತ್ಯ, ಕರಡಿ ವಾದ್ಯ, ಡೊಳ್ಳುಕುಣಿತ, ಗೊಂಬೆ ಕುಣಿತ, ಪೌರಾಣಿಕ ನಾಟಕ ಸೇರಿದಂತೆ ಜಾನಪದ ಕಲಾ ತಂಡಗಳ ಪ್ರದರ್ಶನ ನಡೆಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು.
ಉತ್ಸವದಲ್ಲಿ ಕಲಾಜ್ಯೋತಿ ಜಾನಪದ ಸಂಘಟನೆಯ ಕಾರ್ಯದರ್ಶಿ ಕೊತ್ತನೂರು ಗಂಗಾಧರ್ ಹಾಗೂ ಇತರ ಪದಾಧಿಕಾರಿಗಳು, ಆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು.









