Ganjigunte, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ 2 ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಚುನಾವಣೆ ಮೀಸಲಾತಿ ವಿಷಯ ಬಂದಾಗ ಸಾಮಾನ್ಯ ಸ್ಥಾನಕ್ಕೆ ಮೀಸಲಾದ ಸ್ಥಾನಗಳಿಗೆ ಸಾಮಾನ್ಯ ಸ್ಥಾನದಿಂದ ಗೆದ್ದು ಬಂದ ಅಭ್ಯರ್ಥಿಗಳೆ ಸ್ಪರ್ಧಿಸುವುದು ರಾಜಕಾರಣದಲ್ಲಿ ಸರ್ವೆ ಸಾಮಾನ್ಯ. ಮೀಸಲಾದ ಸ್ಥಾನಗಳಿಗೆ ಮೀಸಲಾಗಿಟ್ಟ ಸ್ಥಾನದಿಂದ ಗೆದ್ದು ಬಂದವರಿಗೆ ಅವಕಾಶಗಳು ಇರುತ್ತವೆ ಎನ್ನುವುದು ರಾಜಕಾರಣದಲ್ಲಿರುವ ಅಲಿಖಿತ ಒಪ್ಪಂದ
ಆದರೆ ಗಂಜಿಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಬಂದಾಗ ರಾಜಕೀಯದಲ್ಲಿನ ಅಲಿಖಿತ ನಿಯಮವನ್ನು ಮೀರಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಸಹಮತ ಮೆರೆದು ಮಾದರಿಯೂ ಆಗಿದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಗೆದ್ದ ಗಂಜಿಗುಂಟೆ ಮೂರ್ತಿ ಅವರನ್ನು ಆಯ್ಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹಾಗೆಯೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷೆ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿಯಲ್ಲಿ ಗೆದ್ದಿದ್ದ ಸದಸ್ಯೆ ಜಿಗ್ನುಮ ಅವರನ್ನು ಆಯ್ಕೆ ಮಾಡಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಇಬ್ಬರೂ ಸಹ ಜೆಡಿಎಸ್ ಬೆಂಬಲಿತರಾಗಿದ್ದು ಗಂಜಿಗುಂಟೆ ಗ್ರಾಮಪಂಚಾಯಿತಿಯ ಆಡಳಿತವು ಜೆಡಿಎಸ್ ಪಾಲಾಗಿದೆ.