Gauribidanuru: ಗೌರಿಬಿದನೂರು ತಾಲ್ಲೂಕಿನ ಕುದುರೆ ಬ್ಯಾಲ್ಯ ಗ್ರಾಮದಲ್ಲಿ, ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಬುಧವಾರ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆ (Savitribai Phule) ಬದುಕು ಆಧಾರಿತ “ಸರಸ್ವತಿಯಾಗಲೊಲ್ಲೆ” ನಾಟಕ ಪ್ರದರ್ಶನ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್ ಅವರು ಮಾತನಾಡಿ, “18ನೇ ಶತಮಾನದ ಪ್ರಮುಖ ಸಮಾಜ ಸುಧಾರಕಿ, ಹೆಣ್ಣು ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಧ್ವನಿ ಎತ್ತಿದ ಪ್ರಥಮ ಮಹಿಳೆ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರು ಸಮಾಜದ ತಾರತಮ್ಯ ಮತ್ತು ಅಸಮಾನತೆಯನ್ನು ದೂರ ಮಾಡುವ ಮಾರ್ಗವನ್ನು ಶಿಕ್ಷಣದಲ್ಲಿ ಕಂಡುಕೊಂಡರು. ತಮ್ಮ ಪತಿ ಜ್ಯೋತಿಬಾ ಫುಲೆ ಅವರ ಸಹಕಾರದಿಂದ, ಅವರು ಎಲ್ಲ ವರ್ಗದ ಜನರಿಗೂ ಶಿಕ್ಷಣ ನೀಡಲು ಪಥವಾಗಿ ಮಾರ್ಗದರ್ಶನೆಯನ್ನು ನೀಡಿದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯೆ ಗಂಗಮ್ಮ, ಮುಖ್ಯ ಶಿಕ್ಷಕ ಎನ್.ನರಸಿಂಹಯ್ಯ, ವೆಂಕಟೇಶ್, ಪುಟ್ಟಮ್ಮ ಪುಷ್ಪಲತಾ, ಗೌತಮ ಬುದ್ಧ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.