Sidlaghatta : ಸರ್ಕಾರಿ ನೌಕರರ ಸಂಘದ ಅಭಿವೃದ್ದಿಯನ್ನು ಸಹಿಸದೇ ಸಂಘದ ವಿರುದ್ದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವುದು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಘದ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಒತ್ತಾಯಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ ಅವರು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ಮಾತನಾಡಿದರು.
ಕಳೆದ 103 ವರ್ಷಗಳ ಹಿಂದೆ ಆರಂಭವಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 5 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದು ರಾಜ್ಯದಾದ್ಯಂತ ಜಿಲ್ಲೆ, ತಾಲ್ಲೂಕು ಘಟಕಗಳಿದ್ದು ಸಕ್ರಿಯ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಬಂದಿದೆ.
ರಾಜ್ಯಾಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ 2019-24 ನೇ ಸಾಲಿಗೆ ಆಯ್ಕೆಯಾದ ನಂತರ ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರಿ ನೌಕರರ ಪರ ಕೆಲಸ ಮಾಡುತ್ತಾ ಬಂದಿರುವುದನ್ನು ಸಸಿಸದ ಕೆಲವರು ವಿನಾಕಾರಣ ರಾಜ್ಯ, ಜಿಲ್ಲೆ ಹಾಗು ತಾಲ್ಲೂಕು ಘಟಕಗಳ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.
ಈ ಕೂಡಲೇ ಸಂಘದ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿ ಶಾಂತಾರಾಮ, ಕರ್ನಾಟಕ ಸರ್ಕಾರ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರು ಜಾನುವಾರು ಅಭಿವೃದ್ದಿ ಅಧಿಕಾರಿ ಮೆಹಬೂಬ್ ಪಾಷ.ಎಂ, ಭೂ ಮಾಪನ ಇಲಾಖೆಯ ಸೂಪರ್ ವೈಸರ್ ವಿ.ವಿ.ಶಿವರುದ್ರಯ್ಯ ಹಾಗೂ ರಾಮನಗರ ತಾಲ್ಲೂಕಿನ ಉಪನ್ಯಾಸಕ ನಿಂಗೇಗೌಡ್ರು ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಕ್ಕಲರೆಡ್ಡಿ, ಕ್ರೀಡಾ ಕಾರ್ಯದರ್ಶಿ ಟಿ.ಟಿ.ನರಸಿಂಹಪ್ಪ, ಪದಾಧಿಕಾರಿಗಳಾದ ಮಧು, ಪ್ರಶಾಂತ್, ವೆಂಕಟರೆಡ್ಡಿ, ವಿಜಯಕುಮಾರ್, ದೇವರಾಜ್, ವಸಂತಕುಮಾರ್, ಅಮರೇಂದ್ರ, ಲಲಿತಮ್ಮ, ಪದ್ಮಾವತಿ ಹಾಜರಿದ್ದರು.