Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಉಳಿಸಿಕೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಇಲಾಖೆಯ ಅಧಿಕಾರಿಗಳು ಸರ್ಕಾರಿ ಜಾಗಗಳನ್ನು ಉಳಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂದು ನಗರಸಭೆಯ ಉಪಾಧ್ಯಕ್ಷ ಬಿ.ಅಫ್ಸರ್ ಪಾಷ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ನಗರದ ಓ ತಿಮ್ಮಯ್ಯ ಬಡಾವಣೆಗೆ ಹೊಂದಿಕೊಂಡಿರುವ ಸರ್ವೆ ನಂ.41/1ಎ ರಲ್ಲಿ 28.12 ಗುಂಟೆ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡಿರುವ ಕುರಿತು ತಾಲ್ಲೂಕು ಕಚೇರಿಗೆ ದೂರು ಸಲ್ಲಿಸಿ ಎಂಟು ತಿಂಗಳಾದರೂ ಸಹ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಸರ್ಕಾರಿ ಜಮೀನುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅನುಮಾನ ಸರ್ವಾಜನಿಕರಿಗೆ ಮೂಡುವಂತಾಗಿದೆ. ಅದೇ ರೀತಿ ಸರ್ಕಾರಿ ಸರ್ವೆ ನಂ. 10 ರಲ್ಲಿ (ಪಹಣಿಯಲ್ಲಿ) ಸರ್ಕಾರಿ ತೋಪು ಎಂದು ನಮೂದಿಸಿದರೂ ಸಹ ಅದೂ ಸಹ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.
ಕಂದಾಯ ನಿರೀಕ್ಷಕರು, ಟೌನ್ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಾಲ್ಲೂಕು ದಂಡಾಧಿಕಾರಿಗಳು ಯಾವುದೇ ರೀತಿಯ ಕ್ರಮ ಜರುಗಿಸದೆ ನಿರ್ಲಕ್ಷ್ಯವಹಿಸಿದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದ ಪಕ್ಷದಲ್ಲಿ ಸರ್ಕಾರಿ ಜಮೀನು ಉಳಿಸುವ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶಿಡ್ಲಘಟ್ಟ ತಾಲ್ಲೂಕಿಗೆ ಕೆ.ಎಸ್.ಆರ್.ಟಿ. ಸಿ ಡಿಪೋ ನಿರ್ಮಿಸಲು ಮೀಸಲಾಗಿದ್ದ ಜಾಗವನ್ನು ಸಹ ವ್ಯಕ್ತಿಯೊಬ್ಬರು ಅಲ್ಲಿದ್ದ ನಾಮ ಫಲಕವನ್ನು ತೆರವುಗೊಳಿಸಿ ತಮ್ಮ ಸ್ವಾಧೀನಲ್ಲಿರಿಸಿಕೊಂಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರ ಜಮೀನು ಉಳಿಸಿಕೊಳ್ಳುವುದರಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಗಳ ಮೂಲಕ ದೂರು ಸಲ್ಲಿಸಲಾಗುವುದು ಎಂದು ನಗರಸಭೆಯ ಉಪಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ರಕ್ಷ ಸಮಿತಿಯ ಮಾಜಿ ಸದಸ್ಯ ಸೈಯದ್ ಬಾಬಾ, ನವಾಜ್ ಖಾನ್, ಮಕ್ಸೂದ್, ನವಾಜ್‍ಪಾಷ ಹಾಜರಿದ್ದರು