Gowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಠ್ಯದಲ್ಲಿ ಕಲಿಯುವ ವಿಜ್ಞಾನದ ವಿಷಯಗಳನ್ನು ಮಾದರಿಗಳು, ಚಿತ್ರಗಳು, ಪ್ರಯೋಗಾಲಯಗಳಲ್ಲಿ ಕಲಿಯಲು ಡಾ.ಎಚ್.ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಬಸ್ಸನ್ನು ಹೊಂದಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮಗೆ ಇರುವ ಈ ಅನುಕೂಲವನ್ನು ಮಕ್ಕಳ ಕಲಿಕೆಗೆ ಚೆನ್ನಾಗಿ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ.
6,7,8 ನೇ ತರಗತಿಗಳ 52 ಮಕ್ಕಳನ್ನು ಶಿಕ್ಷಕರು ತಮ್ಮ ಶಾಲಾ ವಾಹನದಲ್ಲಿ ಹೊರಸಂಚಾರಕ್ಕೆಂದು ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಮತ್ತು ಹೊಸೂರಿನ ಸಮೀಪದ ಡಾ.ಎಚ್.ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು.
ಆಚಾರ್ಯ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ವೀರಸೌಧದ ಮೇಲ್ವಿಚಾರಕಿ ಡಾ. ಸಿ ನಾಗರತ್ನ ಅವರು ವಿದ್ಯಾರ್ಥಿಗಳಿಗೆ ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದೇ ಹೆಸರಾದ ವಿದುರಾಶ್ವತ್ಥದ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ಏಳನೇ ತರಗತಿಯ ಪಠ್ಯದಲ್ಲಿ ಪಂಜಾಬ್ ನ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಇದೆ. ಆದರೆ ನಮ್ಮ ಜಿಲ್ಲೆಯಲ್ಲಿಯೇ 1938 ರಲ್ಲಿ ಅದೇ ರೀತಿಯ ಘಟನೆ ನಡೆದಿತ್ತು ಎಂಬ ಸಂಗತಿಯನ್ನು ಅವರು ಕಣ್ಣಿಗೆ ಕಟ್ಟುವಂತೆ ವಿವರಿಸಿ, ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿಯವರ ಹುಟ್ಟಿನಿಂದ ಅಂತ್ಯ ದವರೆಗಿನ ಚಿತ್ರ ಸರಣಿಯನ್ನು ಮಕ್ಕಳಿಗೆ ತೋರಿಸಿದರು.
ವಿದ್ಯಾರ್ಥಿಗಳನ್ನು ಹೊರಸಂಚಾರಕ್ಕೆ ಕರೆದುಕೊಂಡು ಹೋಗಿದ್ದ ಶಾಲೆಯ ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿ, “ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಈ ತ್ಯಾಗ ಬಲಿದಾನಗಳ ಸ್ಥಳಕ್ಕೆ ಭೇಟಿ ಕೊಟ್ಟು, ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದವರ ಕಥೆ ಕೇಳಿದಾಗ” ಎಂದರು.
ಹೊಸೂರಿನ ಸಮೀಪದ ಡಾ.ಎಚ್.ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತಾರಾಲಯ, ಸೌರವ್ಯೂಹ, ಮಾನವವಿಕಾಸ, ಜ್ವಾಲಾಮುಖಿ, ಗೆಲಾಕ್ಸಿ, ಶಿಲೆಗಳ ಸಂಗ್ರಹ, ಸಂಗೀತ ಆವೃತ್ತಿ, ಶಬ್ಧ ತರಂಗ, ಗುಹಾಂತರ ಚಿತ್ರಗಳು, ಆರ್ಕಿಮಿಡೀಸ್ ತತ್ವ, ಕಾಲದ ಅಳತೆ, ಹೀಗೆ ಹಲವಾರು ಮಾದರಿಗಳ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳು ಮಾಹಿತಿ ಪಡೆದರು. ಹೋಸೂರಿನಲ್ಲಿರುವ ಡಾ.ಎಚ್.ನರಸಿಂಹಯ್ಯ ಅವರ ಸಮಾಧಿ ಮತ್ತು ಆ ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿ ಖುಷಿ ಪಟ್ಟರು ಎಂದು ಹೇಳಿದರು.
ಮಕ್ಕಳ ಜೊತೆ ಮುಖ್ಯ ಶಿಕ್ಷಕ ಎಂ. ದೇವರಾಜ, ಶಿಕ್ಷಕರಾದ ವಿ.ಎಂ.ಮಂಜುನಾಥ, ಎಚ್.ಬಿ.ಕೃಪಾ, ಎಸ್.ಎ.ನಳಿನಾಕ್ಷಿ, ಡಿ.ದಿವ್ಯಾ, ಅಡುಗೆಯವರಾದ ಯಶೋದ, ಶಾರದಮ್ಮ, ಚಾಲಕರಾದ ಮುನಿಕೃಷ್ಣಪ್ಪ ಇದ್ದರು.