Gudibande : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರ ಜಯಂತಿ ಗ್ರಾಮದ ಬಳಿ ನಿಂತಿದ್ದ ಒಂದು ಕಂಟೈನರ್‌ನಲ್ಲಿ ಕಳ್ಳತನ ನಡೆದಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದಲ್ಲಿ ಕಂಟೈನರ್ ಚಾಲಕರ ಕೈವಾಡ ಇರಬಹುದು (Amazon Container Theft) ಎಂಬ ಶಂಕೆ ವ್ಯಕ್ತವಾಗಿದೆ.
ಸಂದೀಪ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗೆ ಸೇರಿದ ಈ ಕಂಟೈನರ್, ಹರಿಯಾಣದ ಗುರುಗಾಮಿಂದ ತಮಿಳುನಾಡಿನ ಹೊಸೂರಿಗೆ ಅಮೆಜಾನ್ ಕಂಪನಿಯ ವಸ್ತುಗಳನ್ನು ಕೊಂಡೊಯ್ಯುತ್ತಿತ್ತು. ಚಾಲಕರಾಗಿ ರಾಜಸ್ಥಾನದ ನಜೀರ್ ಹುಸೇನ್ ಮತ್ತು ಹಬೀದ್ ಕೆಲಸ ಮಾಡುತ್ತಿದ್ದರು. ವಸ್ತುಗಳು ನಿಗದಿತ ಸ್ಥಳಕ್ಕೆ ತಲುಪದಿದ್ದ ಬಗ್ಗೆ ಅಮೆಜಾನ್ ತಂಡ GPS ಮೂಲಕ ತಪಾಸಣೆ ನಡೆಸಿದಾಗ, ಕಂಟೈನರ್ ಗುಡಿಬಂಡೆ ತಾಲ್ಲೂಕಿನ ಜಯಂತಿ ಗ್ರಾಮದ ಬಳಿ ಹೆದ್ದಾರಿಯ ಹೋಟೆಲ್‌ವೊಂದರ ಬಳಿ ನಿಂತಿರುವುದು ಪತ್ತೆಯಾಯಿತು. ಟ್ರಾನ್ಸ್‌ಪೋರ್ಟ್ ಕಂಪನಿಯ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಕಂಟೈನರ್ ಬಾಗಿಲು ತೆರೆದಾಗ, ಬೀಗ ಮುರಿದುಕೊಂಡು ಒಳಗಿರುವ ₹4.80 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದು ತಿಳಿದುಬಂತು. ಈ ವೇಳೆ ಚಾಲಕರು ಪರಾರಿಯಾಗಿದ್ದಾರೆ.
ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ. ಕಂಟೈನರ್ ಜಪ್ತಿ ಮಾಡಲಾಗಿದ್ದು, ಸುತ್ತಮುತ್ತಿನ CCTV ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಚಾಲಕರ ಪತ್ತೆಗೆ ಬಲೆ ಬೀಸಿರುವ ಗುಡಿಬಂಡೆ ಪೊಲೀಸರು, ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
