Gudibande : ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಸಭೆ (KDP meeting) ನಡೆಯಿತು. ಸಭೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ( SN Subbareddy) ಅವರು ವಿವಿಧ ಅಭಿವೃದ್ಧಿ ವಿಚಾರಗಳು ಹಾಗೂ ಸಾರ್ವಜನಿಕ ಅಸೌಲಭ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು “ತಾಲ್ಲೂಕಿನಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನಿಗೆ ಅಕ್ರಮವಾಗಿ ತಡೆಗೋಡೆ ನಿರ್ಮಿಸಿದ್ದಾರೆ. ತಕ್ಷಣವೇ ತೆರವುಗೊಳಿಸಲು ಕ್ರಮವಹಿಸಬೇಕು,” ಎಂದು ತಹಶೀಲ್ದಾರ್ ಸಿಗ್ಬತ್‌ವುಲ್ಲಾ ಅವರಿಗೆ ಅವರು ಸೂಚಿಸಿ ರಿಯಲ್ ಎಸ್ಟೇಟ್ ಮಾಲೀಕರು ಬಡವರಿಂದ ಕಡಿಮೆ ಬೆಲೆಗೆ ಜಮೀನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ನೀಡುವಂತೆ ಹೇಳಿದರು.
ಸೋಮೇನಹಳ್ಳಿ ಮತ್ತು ಗಂಗಾನಹಳ್ಳಿಯಲ್ಲಿ 24 ಗಂಟೆ ವಿದ್ಯುತ್ ಪಡೆದಿರುವ ಟ್ರಾನ್ಸ್‌ಫಾರ್ಮರ್ ಬಳಕೆ ಕುರಿತು ಶಾಸಕರು ಗಂಭೀರವಾಗಿ ಪ್ರಶ್ನಿಸಿದರು ಮತ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. “ಕಾಟೇನಹಳ್ಳಿಯಲ್ಲಿ ಆಟದ ಮೈದಾನದ ಅವಶ್ಯಕತೆ ಇಲ್ಲ. ಬಡವರಿಗೆ ನಿವೇಶನ ನೀಡಲು ಪ್ರಯತ್ನಿಸಿ,” ಎಂದಾಗ ತಾಲ್ಲೂಕು ಪಂಚಾಯಿತಿ ಇಒ ನಾಗಮಣಿ, “750 ನಿವೇಶನಗಳ ಪೈಕಿ 625 ಸಿದ್ಧವಾಗಿವೆ. ಉಳಿದವು ಶೀಘ್ರದಲ್ಲೇ ದುರಸ್ತಿಯಾಗುತ್ತವೆ,” ಎಂದು ಸ್ಪಷ್ಟಪಡಿಸಿದರು. ಶಾಸಕರು ಹಳ್ಳಿಗಳ ಚರಂಡಿ ಸ್ವಚ್ಛತೆ, ಅಮಾನಿಬೈರಸಾಗರ ಕೆರೆಯಲ್ಲಿ ₹10 ಕೋಟಿ ವೆಚ್ಚದ ಸೇತುವೆ ನಿರ್ಮಾಣ, ಹಾಗೂ ₹15 ಕೋಟಿ ಅಮೃತ್ ಯೋಜನೆಯಡಿ ಮನೆಗೆ ನೀರು ಪೂರೈಕೆ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಸದಸ್ಯರಾದ ರಿಯಾಜ್ ಪಾಷಾ, ಬೈರಾರೆಡ್ಡಿ, ಲಕ್ಷ್ಮೀನಾರಾಯಣ, ಗಂಗರಾಜು, ಗುರುಮೂರ್ತಿ ಮತ್ತು ಇಂದಿರಾ ಉಪಸ್ಥಿತರಿದ್ದರು.
