Gudibande: ಗುಡಿಬಂಡೆ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿದರು.
ಮೊದಲು ಗುರುಕುಲಗಳಲ್ಲಿ ಮಕ್ಕಳಿಗೆ ಜೀವನಕ್ಕೆ ಬೇಕಾದಂತಹ ಮಾನವೀಯ ಮೌಲ್ಯ, ಸಾಮಾಜಿಕ ಸೇವೆ ಬಗ್ಗೆ ಬೋಧಿಸುತ್ತಿದ್ದರು. ಶಿಕ್ಷಣ ಈಗ ಉದ್ಯಮವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದಲ್ಲಿರುವ ವಿಚಾರ ಮಾತ್ರ ಬೋಧಿಸದೇ ಜೀವನದಲ್ಲಿ ಪ್ರಮುಖವಾಗಿ ಬೇಕಾಗುವಂತಹ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಆಗ ಮಾತ್ರ ತಾವು ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಅವರು ಹೇಳಿದರು.
ಈಗ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿ ಆ ಮೂಲಕ ವ್ಯಾಪಾರ ಮಾಡಲು ಕೆಲವು ಸಂಸ್ಥೆಗಳು ಹೊರಟಿವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ರಾಜ್ಯಕ್ಕೆ ಹೆಸರುಗಳಿಸಿಕೊಟ್ಟಿದ್ದಾರೆ ಎಂದರು.
ತಹಶೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಕೇವಲ ಸೈದ್ದಂತಿಕವಾಗಿ ಮಾತ್ರ ಬೋಧನೆ ಮಾಡದೆ ಪ್ರಾಯೋಗಿಕವಾಗಿ ಹೇಗೆ ಅದನ್ನು ಪ್ರಾಯೋಗಿಕವಾಗಿ ಹೇಗೆ ಅದನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಸಿಕೊಡಬೇಕು. ಆಗ ವಿದ್ಯಾರ್ಥಿಗಳು ಮತ್ತಷ್ಟು ಕಲಿಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಇಒ ರವೀಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.