Sidlaghatta : ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿ ವೇಗ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಯವರ ಬಳಿ ನಿಯೋಗದೊಂದಿಗೆ ತೆರಳಿ ಈ ಬಗ್ಗೆ ಚರ್ಚಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ರೈತ ಸಂಘದ ಕಚೇರಿಗೆ ಬುಧವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಾಕೃತಿಕವಾಗಿ ಏರುಪೇರು ಆದಂತಹ ಸಂದರ್ಭದಲ್ಲಿ ಅದನ್ನು ಎದುರಿಸಲು ಸರ್ಕಾರ ಸಧೃಡವಾಗಿ, ಸಿದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಮೇವಿನ ಕೊರತೆ ಕಾಡಬಾರದು. ಜನ ಮತ್ತು ಜಾನುವಾರುಗಳಿಗೆ ನೀರಿನ ಕೊರತೆಯಾಗಬಾರದು. ಕೃಷಿ ಉತ್ಪಾದನೆ ಕುಂಠಿತವಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.
ನಮ್ಮ ಚಳುವಳಿ ಮತ್ತು ಸಲಹೆಯ ಮೇರೆಗೆ ಹಿಂದೆ ಇದ್ದ ಸಿದ್ದರಾಮಯ್ಯ ಅವರ ಸರ್ಕಾರ ಈ ಭಾಗದ ನೀರಾವರಿ ಯೋಜನೆಗೆ ಚಾಲನೆ ನೀಡಿತ್ತು. ಎತ್ತಿನಹೊಳೆ ಯೋಜನೆಗೆ ಈಗಿನ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ. ನಿಂತಿರುವ ಎತ್ತಿನಹೊಳೆ ಯೋಜನೆ ಕೆಲಸಗಳು ಶೀಘ್ರವಾಗಿ ಪ್ರಾರಂಭವಾಗಿ, ಕೆಲಸ ವೇಗ ಪಡೆದುಕೊಳ್ಳಬೇಕು. ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದ ನಡುವೆ ನೀರಿನ ಶೇಖರಣೆಗೆ ಭೂಸ್ವಾಧೀನ ಪ್ರಕ್ರಿಯೆ ಬೇಗ ಪ್ರಾರಂಭಿಸಬೇಕು ಎಂದರು.
ರೈತ ಸಂಘ 2016 ರಲ್ಲಿಯೇ ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಬೇಕು ಎಂದು ಒತ್ತಾಯಿಸಿತ್ತು. ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಹರಿಬಿಡಬೇಕು ಎಂದು ಸರ್ಕಾರಕ್ಕೆ ಸಲಹೆಯನ್ನು ನೀಡಿತ್ತು. ಈಗ ಎರಡು ಹಂತಗಳ ಶುದ್ಧೀಕರಣ ಘಟಕಗಳನ್ನಷ್ಟೇ ಮಾಡಲಾಗಿದೆ. ಇನ್ನೊಂದು ಹಂತದ ಶುದ್ಧೀಕರಣದ ಅವಶ್ಯಕತೆ ಇದೆ. ಆಗ ಪರಿಶುದ್ಧವಾದ ನೀರು ಅಂತರ್ಜಲ ಸೇರುತ್ತದೆ. ನಿರ್ಭಯವಾಗಿ ಜನ, ಜಾನುವಾರು, ಪಕ್ಷಿ, ಜಲಚರಗಳು ಬಳಸಬಹುದು. ಮೂರನೇ ಶುದ್ಧೀಕರಣ ಘಟಕವನ್ನು ಸರ್ಕಾರ ಈ ತಕ್ಷಣ ಮಾಡಬೇಕು ಎಂದು ಆಗ್ರಹಿಸಿದರು.
ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಕೊಟ್ಟಿರುವ ಕಾರಣ ಕೊಟ್ಟು ಈ ಭಾಗಕ್ಕೆ ಯಾವುದೇ ಕಾರಣಕ್ಕೂ ಎತ್ತಿನಹೊಳೆ ನೀರನ್ನು ಕಡಿಮೆ ಮಾಡಬಾರದು. ಆವತ್ತಿನ ತೀರ್ಮಾನದಂತೆ ಐದು ಟಿ.ಎಂ.ಸಿ ನೀರು ಕೊಡಲೇಬೇಕು. ಈ ಭಾಗದ ಜನರ ನಿರೀಕ್ಷೆಯನ್ನು ಹುಸಿಗೊಳಿಸಬಾರದು. ಎಚ್.ಎನ್.ವ್ಯಾಲಿ ನೀರನ್ನು ಐವತ್ತೈದು ಕೆರೆಗೆ ವಿಸ್ತರಿಸುವ ಕೆಲಸ ಬೇಗ ಆಗಬೇಕು ಎಂದರು.
ಬಜೆಟ್ :
ಸಿದ್ಧರಾಮಯ್ಯನವರು ಬಹಳ ಸಾಲವನ್ನು ಮಾಡಿದ್ದಾರೆ. ಕೃಷಿ ವಲಯ, ಗ್ರಾಮೀಣಾಭಿವೃದ್ಧಿ, ನೀರಾವರಿಯ ದಿಕ್ಕಿನಲ್ಲಿ ಸ್ವಲ್ಪ ಕೈಹಿಡಿತವಾಗಿದೆ. ಅಭಿವೃದ್ಧಿಯ ಕೆಲಸಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಿತ್ತು. ಬಂಡವಾಳವನ್ನು ಉತ್ಪಾದನೆಗೆ ಹೆಚ್ಚಿನಮಟ್ಟದಲ್ಲಿ ತೊಡಗಿಸಬೇಕಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಯ ಮೇಲೆಯೇ ದೇಶದ ಶೇ 75 ರಷ್ಟು ಕೈಗಾರಿಕೆ ನಿಂತಿದೆ ಮತ್ತು ಎಲ್ಲಾ ರಂಗದ ಆರ್ಥಿಕ ಬೆಳವಣಿಗೆಗೆ ಇದು ಪೂರಕ ಎಂಬುದನ್ನು ಮರೆಯಬಾರದು ಎಂದು ನುಡಿದರು.
ಬರಗಾಲ ಪೀಡಿತ :
ಮಳೆ ಯಾವ ಯಾವ ಜಿಲ್ಲೆಯಲ್ಲಿ ಆಗಿಲ್ಲವೋ ಅವುಗಳನ್ನು ತಕ್ಷಣವೇ ಬರಗಾಲ ಪೀಡಿತವೆಂದು ಘೋಷಿಸಿ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು. ಅಲ್ಪ ಸ್ವಲ್ಪ ಮಳೆಯಾಗಿ ರೈತ ಎರಡೆರಡು ಬಾರಿ ಬಿತ್ತನೆ ಮಾಡಿದ್ದರಿಂದ ಆದ ಹೊರೆಯನ್ನು ಸರಿತೂಗಿಸಲು ರೈತನಿಗೆ ನೆರವನ್ನು ನೀಡುವ ಬಗ್ಗೆ ಸರ್ಕಾರ ಕೆಲಸ ಮಾಡಬೇಕು. ಮಳೆ ತೀರಾ ಬರದಿದ್ದ ಪಕ್ಷದಲ್ಲಿ ಸರ್ಕಾರದ ಆಡಳಿತ ಯಂತ್ರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಈಗಾಗಲೇ ಈ ನಿಟ್ಟಿನಲ್ಲಿ ಸರ್ಕಾರ ಸಿದ್ದತೆ ಪ್ರಾರಂಭಿಸಬೇಕಿತ್ತು ಎಂದರು.
ಸಿದ್ದರಾಮಯ್ಯ ಸರ್ಕಾರ ತಮ್ಮಐದು ಗ್ಯಾರಂಟಿಯೊಂದಿಗೆ ನಮಗೂ ಒಂದು ಗ್ಯಾರಂಟಿಯನ್ನು ಕೊಟ್ಟಿದ್ದರು. ಹಿಂದಿನ ಸರ್ಕಾರ ರೈತರಿಗೆ ವಿಷಕಾರಿಯಾದಂತಹ ಕೃಷಿ ಕಾಯ್ದೆ ಜಾರಿಗೊಳಿಸಿದ್ದದ್ದನ್ನು ಹಿಂಪಡೆಯುತ್ತೇವೆಂದು ಭರವಸೆ ನೀಡಿದ್ದರು. ಅತ್ಯಂತ ಅಪಾಯಕಾರಿ ಎಂದರೆ ಭೂಸುಧಾರಣಾ ಕಾಯ್ದೆಯನ್ನು ಹಿಂಪಡೆಯದೇ ಏಕೆ ಸಿದ್ಧರಾಮಯ್ಯನವರು ಮೀನ ಮೇಷ ಎಣಿಸುತ್ತಿದ್ದಾರೋ ತಿಳಿಯದು. ಈ ಕಾಯ್ದೆಯನ್ನು ಸಂಪೂರ್ಣ ವಾಪಸ್ ಪಡೆಯಬೇಕು. ಈ ಕಾಯ್ದೆ ಐದು ಅಥವಾ ಹತ್ತು ವರುಷ ಮುಂದುವರೆದರೆ, ಶೇ 75 ರಷ್ಟು ರೈತರು ಕೃಷಿ ಭೂಮಿ ಕಳೆದುಕೊಂಡು ಬಿಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೈನುಗಾರಿಕೆ :
ಗೋಹತ್ಯೆ ಕಾಯ್ದೆ ಬಗ್ಗೆ ಮಠಾಧೀಶರು ಅನಗತ್ಯವಾಗಿ ಭಾವನಾತ್ಮಕವಾಗಿ ಮಾತನಾಡುತ್ತಾರೆ. ರೈತನ ಕೈಯಿಂದ ಹೈನುಗಾರಿಕೆಯನ್ನು ಕಸಿದು ಕಾರ್ಪೊರೇಟ್ ಕಂಪೆನಿಗಳಿಗೆ ಕೊಡುವ ಹುನ್ನಾರವಿದು. ರೈತನಿಗೆ ಸಂಬಂಧಿಸಿದ ಉದ್ದಿಮೆಗೆ ಬೇರೆಯವರು ತಲೆ ಹಾಕಲು ನಾವು ಬಿಡುವುದಿಲ್ಲ. ಇದಕ್ಕೆ ರಾಜಕಾರಣ ಬಳಿಯಬಾರದು. ಹೈನುಗಾರಿಕೆ ಸಮೃದ್ಧಿಯಾಗಿ ಬೆಳೆಯಬೇಕೆಂದರೆ ಒಂದು ಲೀಟರ್ ಹಾಲಿಗೆ ಹತ್ತು ರೂಪಾಯಿ ಹೆಚ್ಚಳ ಮಾಡಿ. ಸರ್ಕಾರ ಬೇಕೆಂದರೆ ಗ್ರಾಹಕರಿಗೆ ಹತ್ತು ರೂ ಸಹಾಯಧನ ಕೊಡಲಿ. ಆದರೆ ರೈತನಿಗೆ ಮಾತ್ರ ಬೆಲೆ ಕಮ್ಮಿಯಾಗಬಾರದು ಎಂದರು.
ವಿಮೆ :
ಬೆಳೆ ವಿಮೆಯನ್ನು ರೈತನಿಗೆ ಊರುಗೋಲಾಗಲಿ ಎಂಬ ಉದ್ದೇಶದಿಂದ ಸರ್ಕಾರ ವಿಶಾಲ ದೃಷ್ಟಿಯಿಂದ ತಂದಿದೆ. ಆದರೆ, ವಿಮೆ ಕಂಪೆನಿಗಳ ಉದ್ದಾರಕ್ಕೆ ಈ ಕಾರ್ಯಕ್ರಮಗಳು ಈಗ ನಡೆಯುತ್ತಿವೆ. ಸರ್ಕಾರದ ಜೊತೆ ಮಾತುಕತೆಗೆ ಕುಂತಾಗ ಈ ಬಗ್ಗೆ ವಿವರಿಸುತ್ತೇವೆ. ಬೆಳೆ ವಿಮೆ ಸಮರ್ಪಕವಾಗಿದ್ದಲ್ಲಿ ಪ್ರಾಕೃತಿಕವಾಗಿ ನಷ್ಟವುಂಟಾದಾಗ ಒಂದಷ್ಟು ಭಾಗ ಭರ್ತಿ ಮಾಡಿಕೊಡುತ್ತದೆ. ಸರ್ಕಾರಕ್ಕೆ ನೇರ ಹೊರೆ ಆಗುವುದಿಲ್ಲ ಎಂದರು.
ಆವರ್ತ ನಿಧಿಯನ್ನು ಸ್ಥಾಪಿಸಲು ಒತ್ತಾಯ :
ಕೃಷಿ ಬೆಲೆಯನ್ನು ಕಾಪಾಡಲು ಆವರ್ತ ನಿಧಿಯನ್ನು ಸ್ಥಾಪಿಸಲು ಹಿಂದಿನಿಂದಲೂ ರೈತ ಸಂಘ ಒತ್ತಾಯ ಮಾಡುತ್ತಿದೆ. ಪ್ರಾಕೃತಿಕ ವಿಕೋಪಗಳು ಎದುರಾದಾಗ ದೆಹಲಿಯ ಮುಖ ನೋಡುವುದು ತಪ್ಪುತ್ತದೆ. ನಿಧಿ ನಿಮ್ಮಲ್ಲಿದ್ದರೆ ಯಾವುದೇ ತೊಂದರೆಯಾದರೂ ತಕ್ಷಣವೇ ಕಾರ್ಯಪ್ರವೃತ್ತರಾಗಬಹುದು ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಬಿ.ನಾರಾಯಣಸ್ವಾಮಿ, ಮುನಿನಂಜಪ್ಪ, ರಾಮಕೃಷ್ಣಪ್ಪ, ವೇಣುಗೋಪಾಲ್, ಎಚ್.ಜಿ.ಗೋಪಾಲಗೌಡ, ಮುನಿರಾಜು, ಕೋಟಹಳ್ಳಿ ಶ್ರೀನಿವಾಸ್, ರಮೇಶ್, ಬೀರಪ್ಪ ಹಾಜರಿದ್ದರು.