Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ‘ಇಂದ್ರ ಧನುಷ್ 5.0’ (Indradhanush Abhiyan 5.0) ಲಸಿಕೆ (Vaccination Drive) ಕಾರ್ಯಕ್ರಮ ಆಯೋಜಿಸಲಾಗಿತ್ತು.
.ದಡಾರ, ರುಬೆಲ್ಲಾ, ಜೆಇ, ಮೆದುಳು ಜ್ವರ, ಟಿಡಿ, ಗಂಟಲು ಮಾರಿ ಮತ್ತು ಧನುರ್ವಾಯುಮಾರಕ ಕಾಯಿಲೆಗಳಿಂದ ಮಕ್ಕಳನ್ನು ಮುಕ್ತಗೊಳಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಲಸಿಕೆಗಳನ್ನು ನೀಡಬೇಕು. ಐದು ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಗಳನ್ನು ನೀಡಬೇಕು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಯಾವ ಗರ್ಭಿಣಿ ಮತ್ತು ಮಗು ಲಸಿಕೆಯಿಂದ ವಂಚಿತ ಆಗಬಾರದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಇಂದ್ರಧನುಷ್ 5.0 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಳ್ಳಿಗಳು, ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಈ ಸಂಬಂಧ ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ಆಗಬೇಕು. ಮಕ್ಕಳ ಆರೋಗ್ಯ ಪರಿಸ್ಥಿತಿ ಪರೀಕ್ಷಿಸಿ ಲಸಿಕೆ ನೀಡಿ ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು ಎಂದು ರವೀಂದ್ರ ಸೂಚಿಸಿದರು.
ಜಿಲ್ಲೆಯೆಯಾದ್ಯಂತ ಮೂರು ಸುತ್ತುಗಳಲ್ಲಿ ಅಭಿಯಾನ ನಡೆಯಲಿದ್ದು ಅಭಿಯಾನವು ಆ.7ರಿಂದ 12ರವರೆಗೆ, ಸೆ.11ರಿಂದ 16ರವರೆಗೆ ಮತ್ತು ಅ.9ರಿಂದ 14ರವರೆಗೆ ನಡೆಯಲಿದೆ. ಪ್ರತಿ ತಿಂಗಳಲ್ಲಿ ಆರು ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ವಿ.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಂ. ಪ್ರಕಾಶ್, ನಗರಸಭೆ ಆಯುಕ್ತೆ ಪಂಪಶ್ರೀ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.