Chikkaballapur :ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಲೋಕಶಿಕ್ಷಣ ಸಮಿತಿ, ಡಿಎಸ್‌ಇಆರ್‌ಟಿ ಲೋಕಶಿಕ್ಷಣ ವಿಭಾಗದಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ (International Literacy Day) ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ಆರ್ಥಿಕ ವ್ಯವಹಾರದ ಶಿಸ್ತು, ಮಹಿಳಾ ಸಬಲೀಕರಣಕ್ಕೆ ಸಾಕ್ಷರತೆ ಅಗತ್ಯವಿದ್ದು ಸರ್ಕಾರ, ಸಂಸ್ಥೆಗಳು, ವೈಯಕ್ತಿಕ ಪ್ರಯತ್ನಗಳು ದ್ವಿಗುಣಗೊಂಡು ಸಂಪೂರ್ಣ ಸಾಕ್ಷರತೆ ಸಾಧಿಸಲು ಪ್ರಯತ್ನಿಸಬೇಕಿದೆ. ಆರೋಗ್ಯ, ಲಿಂಗಸಮಾನತೆ, ಶಾಂತಿ, ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲಾ ವಯಸ್ಕರು, ಯುವಕರು, ಹೆಣ್ಣು ಮತ್ತು ಗಂಡು ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಪಡೆಯಬೇಕಾದ ಅಗತ್ಯವಿದೆ. ಪುರುಷ ಮತ್ತು ಮಹಿಳಾ ಸಾಕ್ಷರತೆಯ ಪ್ರಮಾಣದ ನಡುವಿನ ಅಂತರ ಕಡಿಮೆಗೊಳಿಸಬೇಕಿದೆ. ಪಂಚಾಯಿತಿ ಪ್ರತಿನಿಧಿಗಳು ಸಾಕ್ಷರರಾಗಬೇಕು. ಹಿಂದುಳಿದ ತಾಲ್ಲೂಕುಗಳಲ್ಲಿ ಆಯ್ದ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಪಂಚಾಯಿತಿಗಳನ್ನಾಗಿ ಮಾಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮುನಿಕೆಂಪೇಗೌಡ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಬಿಸಿಎಂ ಇಲಾಖೆಯ ರಾಮಾನುಜಂ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ಶಿಡ್ಲಘಟ್ಟ ಬಿಆರ್‌ಸಿಯ ಲಕ್ಷ್ಮಿನಾರಾಯಣ್, ಬಾಗೇಪಲ್ಲಿಯ ಶಿವಪ್ಪ, ಸುರೇಶ್, ಎಂ.ಮನು, ವಿವಿಧ ತಾಲ್ಲೂಕುಗಳ ಬಿಆರ್‌ಪಿಗಳು, ಸಿಆರ್‌ಪಿ, ಮುಖ್ಯಶಿಕ್ಷಕರು, ನವಸಾಕ್ಷರರು, ಸ್ವಯಂಸೇವಕರು ಮತ್ತಿತರರು ಪಾಲ್ಗೊಂಡಿದ್ದರು.