Chintamani : ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಚಿಂತಾಮಣಿ ತಾಲ್ಲೂಕಿನ 83 ಗ್ರಾಮಗಳಿಗೆ ಮನೆ ಮನೆಗೂ ನಲ್ಲಿ ನೀರು ಕೊಡುವ ಜಲಜೀವನ್ ಮಿಷನ್ (Jal Jeevan Mission) ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್ “ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆ ಮನೆ ಮನೆಗೂ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆ 2024ರಲ್ಲಿ ಮುಕ್ತಾಯವಾಗಲಿದ್ದು ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯ ಚಿಲಕಲನೇರ್ಪು ಹೋಬಳಿಯ 23 ಗ್ರಾಮಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಶಿಡ್ಲಘಟ್ಟದ ಕಾರ್ಯಕ್ರಮದಲ್ಲಿ ಆ ಗ್ರಾಮಗಳಿಗೆ ಚಾಲನೆ ನೀಡಲಾಗುವುದು. ಅಧಿಕಾರಿಗಳು ಯೋಜನೆ ನೀಲನಕ್ಷೆ, ಕ್ರಿಯಾಯೋಜನೆ ತಯಾರಿಸುವಾಗ ನೀತಿ ನಿಯಮಗಳಿಗೆ ಜೋತು ಬೀಳದೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಳ್ಳಬೇಕು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ಪೈಪ್ ಬಳಸಬೇಕು. ಖಾಸಗಿ ಸಂಸ್ಥೆಯಿಂದ ಕಾಮಗಾರಿಯ ಗುಣಮಟ್ಟದ ಪರೀಕ್ಷೆ ಮಾಡಿಸಲಾಗುತ್ತದೆ. ರಸ್ತೆ ತುಂಡುಮಾಡಿ ಪೈಪ್ ಅಳವಡಿಸಿದಾಗ ಮತ್ತೆ ರಸ್ತೆಯನ್ನು ಸರಿಪಡಿಸಬೇಕು. ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು” ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕೃಷಿಕ ಸಮಾಜದ ಅಧ್ಯಕ್ಷ ಎಂ.ಗೋವಿಂದಪ್ಪ ಮತ್ತಿತರರು ಭಾಗವಹಿಸಿದ್ದರು.