Chikkaballapur : ಚಿಕ್ಕಬಳ್ಳಾಪುರ ನಗರದ ಐತಿಹಾಸಿಕ ಪ್ರಸಿದ್ಧ ಜಾಲಾರಿ ಗಂಗಮಾಂಭ ದೇವಾಲಯದ (Jalari Gangamambha Temple) 60ನೇ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗವು (Dharmarayaswamy Karaga) ಶ್ರದ್ಧಾಭಕ್ತಿ, ಸಂಭ್ರಮದಿಂದ ನಡೆಯಿತು. ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ನಗರದ ತುಂಬೆಲ್ಲ ರಾತ್ರಿ ಜಾತ್ರೆಯ ಸಡಗರ ಮನೆ ಮಾಡಿತ್ತು. ಅನೇಕ ಕಡೆಗಳಲ್ಲಿ ಭಕ್ತರು ಅನ್ನಸಂತರ್ಪಣೆ, ಪಾನಕ ಮತ್ತು ಹೆಸರು ಬೇಳೆ ವಿತರಣೆಯ ವ್ಯವಸ್ಥೆ ಮಾಡಿದ್ದರು.
ಗಂಗಮಾಂಭ ದೇವಾಲಯದಲ್ಲಿ ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮನವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದ ನಂತರ ರಾತ್ರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಅಲಂಕೃತರಾಗಿದ್ದ ಕರಗದ ಪೂಜಾರಿ ಮೇಲೂರಿನ ಕೆ.ಧರ್ಮೇಂದ್ರ ಅವರು ಹೂವಿನ ಕರಗ ಹೊತ್ತು ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದಿಂದ ಹೊರಬಂದರು. ಪೂಜಾರಿಯ ಹಿಂದೆ ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೆ.ವಿ ಟ್ರಸ್ಟ್ ನ ಅಧ್ಯಕ್ಷ ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮತ್ತಿತರು ಉಪಸ್ಥಿತರಿದ್ದರು.