Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ (Janata Darshan) ಸ್ವೀಕೃತವಾದ ಮನವಿಗಳು, ಅರ್ಜಿಗಳ ವಿಲೇವಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು (Review Meeting) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ಸೆಪ್ಟೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳು, ಮನವಿಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡಬೇಕು. ಜಿಲ್ಲೆಗೆ ಸಂಬಂಧಪಟ್ಟಂತೆ ಒಟ್ಟು 245 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದ್ದು ಈ ಪೈಕಿ ಬಹುತೇಕ ಅರ್ಜಿಗಳನ್ನು ಭೌತಿಕವಾಗಿ ವಿಲೇವಾರಿ ಮಾಡಲಾಗಿದೆ. ಆದರೆ ವಿಲೇವಾರಿ ಕ್ರಮವನ್ನು ತಂತ್ರಾಂಶದಲ್ಲಿ ನಮೂದಿಸಿ ಬಾಕಿ ಪಟ್ಟಿಯಿಂದ ಅರ್ಜಿಗಳನ್ನು ಮುಕ್ತಗೊಳಿಸುವ ಕಾರ್ಯವನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಮಾಡಿಲ್ಲ. ಆದ್ದರಿಂದ ಈ ಕಾರ್ಯವನ್ನು ಆದ್ಯತೆ ಮೇಲೆ ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು” ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜನತಾ ದರ್ಶನದಲ್ಲಿ ಉದ್ಯೋಗ ಅರಸಿ ಬಂದ 3 ಅರ್ಜಿದಾರರ ಪೈಕಿ ಇಬ್ಬರಿಗೆ ಉದ್ಯೋಗಾವಕಾಶ ಮಾಡಿಕೊಟ್ಟ ಉದ್ಯೋಗ ವಿನಿಮಯ ಅಧಿಕಾರಿಯನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.