Sidlaghatta : ಜಂಗಮಕೋಟೆಯ ಜೆ.ಎಂ.ಮಂಜುನಾಥ ಅವರ ಶ್ರೀ ನಂಜುಂಡೇಶ್ವರ ಗಾರುಡಿ ಗೊಂಬೆ ನೃತ್ಯ ಕಲಾವಿದರ ಸಂಘಕ್ಕೆ ಮೈಸೂರಿನಲ್ಲಿ ನಡೆದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವೆಂದು ತೃತೀಯ ಬಹುಮಾನವಾಗಿ ಐದು ಸಾವಿರ ನಗದು ಬಹುಮಾನ ನೀಡಿದ್ದಾರೆ.
ಗಾರುಡಿಗೊಂಬೆ ಕುಣಿತ ಕಲೆಯಲ್ಲಿ ಅಸಾಧಾರಣವಾದ ಪರಿಣತಿ ಪಡೆದು ಸಾಧನೆ ಮಾಡಿರುವ ನಂಜುಂಡೇಶ್ವರ ಗಾರುಡಿಗೊಂಬೆ ಕಲಾತಂಡದ ಮುನಿರಾಜು ಅವರ ಮಗನಾದ ಜೆ.ಎಂ.ಮಂಜುನಾಥ್, ಮನೆಯಲ್ಲಿ ಗಾರುಡಿಗೊಂಬೆ ತಯಾರಿಸುವುದು, ಬಣ್ಣ ಬಳಿಯುವುದನ್ನು ನೋಡುತ್ತಾ ಅದರೊಂದಿಗೆ ಆಡುತ್ತಾ ಬೆಳೆದಂತೆ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ಅವರು ತೊಡಗಿಸಿಕೊಂಡವರು. ಅವರು ಅತ್ಯುತ್ತಮ ಗಾರುಡಿ ಗೊಂಬೆ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಲವಾರು ಮನೆಗಳಲ್ಲಿ ತ್ರೀಡಿ ಚಿತ್ರಕಲೆಯನ್ನು ರಚಿಸುವ ಇವರು, ಮಕ್ಕಳಿಗೆ ಪ್ರಾಣಿಗಳಂತೆ, ಯಕ್ಷಗಾನ, ದೇವರುಗಳು ಮುಂತಾದ ರೀತಿಯಲ್ಲಿ ಮೇಕಪ್ ಮಾಡುವುದು, ದೇವಸ್ಥಾನದ ಗೋಪುರಗಳ ಮೂರ್ತಿಗಳನ್ನು ಚಿತ್ರಿಸುವುದು, ಆನೆಗಳನ್ನು ಬಣ್ಣ ಬಳಿದು ಅಲಂಕರಿಸುವ ಕೆಲಸವನ್ನೂ ಸಹ ಮಾಡುತ್ತಾರೆ.
ಕುಟುಂಬದ ಕಲೆಯಾದ ಗಾರುಡಿಗೊಂಬೆಗಳೊಂದಿಗೆ ಹಲವು ಊರು, ರಾಜ್ಯಗಳನ್ನು ಸುತ್ತಿದ್ದಾರೆ. ಮೈಸೂರಿಗೆ ಹದಿನೈದು ಮಂದಿ ತಂಡದೊಂದಿಗೆ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
“ದೊಡ್ಡದಾದ ಯಕ್ಷಗಾನ ಗೊಂಬೆಗಳು, ರಾಜ ರಾಣಿ ಕುದುರೆಗಳು, ಹಾಸ್ಯಪಾತ್ರಗಳಾದ ಚಿಂಪಾಂಜಿ ಮತ್ತು ತಾತನ ತಲೆ, ಮರಗಾಲು ಕುಣಿತಗಾರರು ಹಾಗೂ ಹತ್ತು ಅಡಿಯ ಆಂಜನೇಯ. ನಮ್ಮ ಹನುಮಾನ್ ವಿಶೇಷವಾದದ್ದು. ಮಂಗಳೂರಿನಲ್ಲಿ ಆ ರೀತಿಯದ್ದು ನೋಡಿ, ಅದರಂತೆಯೇ ನಾನೇ ತಯಾರು ಮಾಡಿದ್ದೆ. ನಮ್ಮ ಕಲಾವಿದರು ಆರು ಕಿ.ಮೀ ದೂರ ಗೊಂಬೆಗಳನ್ನು ಹೊತ್ತು, ಜನರಿಗೆ ಮನರಂಜನೆ ನೀಡುತ್ತಾ ಬನ್ನಿಮಂಟಪದವರೆಗೂ ಹೋದದ್ದು ನಿಜಕ್ಕೂ ಸಾಹಸ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡು, ಅಲ್ಲಿ ಜನಮೆಚ್ಚುಗೆ ಪಡೆದು, ಪ್ರಶಸ್ತಿಯನ್ನೂ ಪಡೆದಿರುವುದು ತುಂಬಾ ಸಂತಸ ತಂದಿದೆ” ಎಂದು ಜೆ.ಎಂ.ಮಂಜುನಾಥ್ ತಿಳಿಸಿದರು.