Chelur : ಚೇಳೂರು ತಾಲ್ಲೂಕಿನ ಗಡಿಗವಾರಿಪಲ್ಲಿ ಗ್ರಾಮದಲ್ಲಿ CPM ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ (JC Baiyya Reddy Death) ಅವರ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಶನಿವಾರ ಸಂಜೆ ಬೆಂಗಳೂರಿನಿಂದ ಬೈಯ್ಯಾರೆಡ್ಡಿ ಅವರ ಪಾರ್ಥಿವ ಶರೀರವನ್ನು ತಾಲ್ಲೂಕಿನ ಗಡಿಗವಾರಿಪಲ್ಲಿ ಗ್ರಾಮದ ಮನೆಗೆ ತರಲಾಯಿತು. ಕೋಲಾರ ಅವಿಭಜಿತ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಾಗೂ ವಿವಿಧ ರಾಜ್ಯಗಳಿಂದ ಸಿಪಿಎಂ ಮುಖಂಡರು, ಗ್ರಾಮಸ್ಥರು ಮೃತರ ಅಂತಿಮ ದರ್ಶನ ಪಡೆದರು.

ಭಾನುವಾರ ಬೈಯ್ಯಾರೆಡ್ಡಿ ಮನೆಯ ಮುಂದೆ ಸಿಪಿಎಂ ನಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಬಿ.ವಿ.ರಾಘುವುಲು “ಬೈಯ್ಯಾರೆಡ್ಡಿ ವಿದ್ಯಾರ್ಥಿ ಸಂಘಟನೆಯ ಹೋರಾಟಗಳಿಂದ ಬಂದಿದ್ದಾರೆ. ರೈತ, ಕಮ್ಯೂನಿಸ್ಟ್ ಚಳವಳಿಗಳ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇದ್ದರು. ಅಪ್ರತಿಮ ಹೋರಾಟಗಾರನ ನಿಧನ ತುಂಬಲಾರದ ನಷ್ಟ. ಬೈಯ್ಯಾರೆಡ್ಡಿ ಹೋರಾಟದ ಹಾದಿಯನ್ನು ಪಕ್ಷ ಮುನ್ನಡೆಸುತ್ತದೆ” ಎಂದು ತಿಳಿಸಿದರು.
ಮೃತರ ಅಂತ್ಯಕ್ರಿಯೆಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಕೆ.ಎನ್.ಉಮೇಶ್, ಯು.ಬಸವರಾಜು, ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜು, ವರಲಕ್ಷ್ಮಿ, ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಪ್ರಜಾ ನಾಟ್ಯ ಕಲಾ ಮಂಡಳಿ ಕಲಾವಿದರು ತಮಟೆ ವಾದನದೊಂದಿಗೆ ಕ್ರಾಂತಿಗೀತೆ ಹಾಡಿದರು, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಎಂ.ಬಿ.ಬೈರೆಡ್ಡಿ, ಸ್ಥಳೀಯ ಶಾಖಾ ಕಾರ್ಯದರ್ಶಿ ರಾಹುಲ್, ಸಿಪಿಎಂ ಮುಖಂಡರು, ಗ್ರಾಮಸ್ಥರು ಭಾಗಿಯಾದರು.