![](https://www.sidlaghatta.com/wp-content/uploads/2022/07/21JuSd01a.jpg)
Kambadahalli, Sidlaghatta : ಕೇಂದ್ರ ಮಾಜಿ ಸಚಿವ, ಕೋಲಾರ ಸಂಸತ್ ಕ್ಷೇತ್ರದ ಕಾಂಗ್ರೆಸ್‌ನ ಪ್ರಭಾವಿ ನಾಯಕರೂ ಆಗಿರುವ ಕೆ.ಎಚ್.ಮುನಿಯಪ್ಪ (K H Muniyappa) ಅವರು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿ ನಡೆದ ಊರ ಜಾತ್ರೆಗೆ ಬಿಜೆಪಿಯ (BJP) ಪ್ರಭಾವಿ ಮುಖಂಡರನ್ನು ಊಟಕ್ಕೆ ಆಹ್ವಾನಿಸಿದ್ದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲೆಂದೇ ಕೆ.ಎಚ್.ಮುನಿಯಪ್ಪ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ತಮ್ಮ ಮನೆಗೆ ಊರ ಜಾತ್ರೆಯ ಊಟದ ನೆಪದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ವರ್ಚಸ್ಸು ಶಕ್ತಿ ಹೊಂದಿರುವ ಕೆಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಳೆದ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೆ ಊರ ಜಾತ್ರೆಯ ನೆಪದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನಂ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ತಮ್ಮ ಮನೆಗೆ ಊಟಕ್ಕಾಗಿ ಆಹ್ವಾನಿಸಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಇದು ಊರ ಜಾತ್ರೆ, ನಮ್ಮ ಮನೆಗೆ ಊಟಕ್ಕಾಗಿ ಆತ್ಮೀಯವಾಗಿ ಪಕ್ಷಾತೀತವಾಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ ಎಂದು ಕೆ.ಎಚ್.ಮುನಿಯಪ್ಪ ಹೇಳುತ್ತಿದ್ದಾರೆ ಆದರೂ ಸ್ಥಳೀಯ ಶಾಸಕ ವಿ.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾರೂ ಕಂಡುಬರಲಿಲ್ಲ.
ಸಚಿವ ಡಾ.ಕೆ.ಸುಧಾಕರ್ ಹಾಗೂ ಅವರ ಬೆಂಬಲಿಗರು, ಕೆ.ಎಚ್.ಮುನಿಯಪ್ಪ ಅವರ ಬಣದಲ್ಲಿ ಗುರ್ತಿಸಿಕೊಂಡ ಕಾಂಗ್ರೆಸ್ ಮುಖಂಡರಷ್ಟೆ ಕಾಣಿಸಿಕೊಂಡಿದ್ದು ಸಂಜೆಗೆ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಮುನಿರತ್ನಂ ಅವರೂ ಸಹ ಬರುತ್ತಾರೆ ಎನ್ನಲಾಗಿದೆ.
ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಅವರ ಬೆಂಬಲಿಗ ಬಣ ಹಾಗೂ ಕೆ.ಎಚ್.ಮುನಿಯಪ್ಪ ಅವರ ನಡುವೆ ಮುಸುಕಿನ ಗುದ್ದಾಟ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಹಾಗೂ ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡ ಮೇಲಂತೂ ರಮೇಶ್‌ಕುಮಾರ್ ಬಣಕ್ಕೂ ಕೆ.ಎಚ್.ಮುನಿಯಪ್ಪ ಬಣದ ನಡುವೆ ಕಂದಕ ಇನ್ನಷ್ಟು ಹೆಚ್ಚಿದೆ.
ಈ ಮೊದಲಿನಿಂದಲೂ ಕೆ.ಎಚ್.ಮುನಿಯಪ್ಪ ಅವರು ಜೆಡಿಎಸ್‌ನ ವರಿಷ್ಠ ದೇವೇಗೌಡರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವುದು ಬಹಿರಂಗ ಸತ್ಯ. ಆದರೆ ಇದೀಗ ಊರ ಜಾತ್ರೆಯ ನೆಪದಲ್ಲಿ ಬಿಜೆಪಿಯ ಪ್ರಭಾವಿ ಸಚಿವರನ್ನು ಮನೆಗೆ ಕರೆದು ಸತ್ಕರಿಸಿ ಚರ್ಚೆ ನಡೆಸಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್‌ನಲ್ಲಿ ತನ್ನನ್ನು ಮೂಲೆ ಗುಂಪು ಮಾಡುತ್ತಿರುವ ಬಣಕ್ಕೆ ತನ್ನ ಶಕ್ತಿ ಪ್ರದರ್ಶನಕ್ಕೆ ಇದು ದಾರಿ ಮಾಡಿಕೊಡಲಿದೆಯಾ ಇಲ್ಲವೇ ಜೆಡಿಎಸ್ ಇಲ್ಲವೇ ಬಿಜೆಪಿ ಎರಡೂ ಪಕ್ಷಗಳ ಬಾಗಿಲು ತನಗೆ ತೆರೆದಿದೆ ಎನ್ನುವ ಸಂದೇಶ ರವಾನೆಗೆ ಇದು ವೇದಿಕೆ ಮಾಡಿಕೊಂಡರಾ ಎನ್ನುವ ಪ್ರಶ್ನೆ ಎದುರಾಗಿದ್ದು ಉತ್ತರಕ್ಕೆ ಕಾದು ನೋಡಬೇಕಿದೆ.
“ಕೆ.ಎಚ್.ಮುನಿಯಪ್ಪ ಅವರಂತಹ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಒಂದು ಶಕ್ತಿಯಿದ್ದಂತೆ ಅವರ ಶಕ್ತಿಯನ್ನು ಬಳಸಿಕೊಳ್ಳದ ಆ ಪಕ್ಷದ ನಾಯಕರು ನಿಜವಾದ ನತದೃಷ್ಟರು” ಎಂದು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
“ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕೆ.ಎಚ್.ಮುನಿಯಪ್ಪ ಪಾತ್ರ ಮಹತ್ವದ್ದಾಗಿದೆ. ಅವರು ಯಾವುದೇ ಪಕ್ಷದಲ್ಲಿರಲಿ ಆ ಪಕ್ಷಕ್ಕೆ ಶಕ್ತಿಯಾಗಿ ದುಡಿಯುತ್ತಾರೆ. ಅವರ ಶಕ್ತಿಯನ್ನು ಬಳಸಿಕೊಳ್ಳದವರು ನಿಜವಾಗಿಯೂ ನತದೃಷ್ಟರು. ಒಂದು ವೇಳೆ ಅವರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದರೆ ಅವರನ್ನು ಬರಮಾಡಿಕೊಳ್ಳುವ ಪಕ್ಷದವರು ನಿಜವಾಗಿಯೂ ಭಾಗ್ಯವಂತರು” ಎಂದರು.
“ಕಳೆದ ಮೂರು ದಶಕಗಳಿಂದ ಕೆ.ಎಚ್.ಮುನಿಯಪ್ಪ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ದಾರೆ. ವಿವಿಧ ಪಕ್ಷಗಳ ಬಾಗಿಲು ಬಡಿಯುತ್ತಿದ್ದ ರಮೇಶ್‌ಕುಮಾರ್ ರನ್ನು ಪಕ್ಷಕ್ಕೆ ಕರೆತಂದ ಕಾರಣಕ್ಕೆ ಆತ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆಯೇ ಹೊರತು ಅವರಿಂದ ಪಕ್ಷಕ್ಕಾಗಲಿ, ಜಿಲ್ಲೆಗಾಗಲಿ ಯಾವುದೇ ಕೊಡುಗೆಯಿಲ್ಲ.
ಕಳೆದೆರಡು ತಿಂಗಳ ಹಿಂದೆಯಷ್ಟೇ ಗ್ರಾಮದೇವತೆ ಶ್ರೀ ಕಾಳಿಕಾಂಬ ದೇವಾಲಯದ ಪ್ರತಿಷ್ಠಾಪನೆ ನಡೆಸಿದ್ದು, ಗ್ರಾಮಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಳ್ಳುವಂತೆ ಆಹ್ವಾನಿಸಿದ್ದ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಸದ್ಯಕ್ಕೆ ನಮ್ಮ ಭೇಟಿಯನ್ನು ರಾಜಕೀಯವಾಗಿ ಬಿಂಬಿಸುವುದು ಬೇಡ” ಎಂದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, “ಗ್ರಾಮದೇವತೆ ಕಾಳಿಕಾಂಭದೇವಿಯ ಅನುಗ್ರಹದಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಲು ಸಾಧ್ಯವಾಯಿತು. ಕಳೆದ 50 ವರ್ಷಗಳಿಂದ ಡಾ.ಕೆ.ಸುಧಾಕರ್ ಕುಟುಂಬಕ್ಕೂ ನಮಗೂ ಉತ್ತಮ ನಂಟಿರುವುದರಿಂದ ಗ್ರಾಮದೇವತೆ ಕಾಳಿಕಾಂಭ ದೇವಿಯ ದೇವಾಲಯ ಮರು ಪ್ರತಿಷ್ಟಾಪನೆ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದೆ. ಹಾಗಾಗಿ ಇಂದು ಆರೋಗ್ಯಸಚಿವ ಡಾ.ಕೆ.ಸುಧಾಕರ್, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸೇರಿದಂತೆ ಎರಡೂ ಜಿಲ್ಲೆಗಳ ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ, ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಿರ್ಧಾರವನ್ನು ತಿಳಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮುಖಂಡ ಬಿಸ್ಸೇಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಹಾಜರಿದ್ದರು.