Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ (Kaiwara) ಯೋಗಿನಾರೇಯಣ ಸಭಾಂಗಣದಲ್ಲಿ ಗುರುವಾರ ಕಾಲಜ್ಞಾನಿ ಯೋಗಿ ನಾರೇಯಣ ತಾತಯ್ಯ (Sri Kaivara Yogi Nareyana Mutt)ನವರ 187ನೇ ಜೀವ ಸಮಾಧಿ ಪ್ರವೇಶದ ಆರಾಧನಾ ಮಹೋತ್ಸವ (Kaiwara Yogi Nareyana Aradhana) ಹಮ್ಮಿಕೊಳ್ಳಲಾಗಿತ್ತು. ಆರಾಧನಾ ಮಹೋತ್ಸವ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ಅಭಿಷೇಕ ,ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ “ಸದ್ಗುರುವನ್ನು ಆಶ್ರಯಿಸದಿರುವುದೇ ಮಾನವನ ಕಷ್ಟಗಳಿಗೆ ಕಾರಣವಾಗಿದ್ದು ಮಾನವರಾಗಿ ಹುಟ್ಟಿದ ಮೇಲೆ ತನ್ನ ಆತ್ಮಶೋಧನೆ ಮಾಡಿಕೊಂಡು ಯೋಗ್ಯವಾದ ಗುರು ಆಶ್ರಯಿಸಬೇಕು. ನಿರಂತರವಾದ ಗುರು ಸ್ಮರಣೆಯಿಂದ ನಮ್ಮೊಳಗೆ ಚಿಂತನೆ ಆರಂಭವಾಗಿ ಎಲ್ಲಾ ರೀತಿಯ ಕರ್ಮ ನಾಶವಾಗುತ್ತದೆ. ಅಹಂಕಾರ ಮಾನವನಿಗೆ ಡ್ಡ ಶತ್ರುವಾಗಿದ್ದು ಅದನ್ನು ಕಳೆದುಕೊಳ್ಳಬೇಕಾದರೆ ಮೊದಲು ಗುರುವಿಗೆ ದಾಸನಾಗಿ ಅವರ ಉಪದೇಶದ ಬೆಳಕಿನಲ್ಲಿ ಸಾಧನೆ ಮಾಡಬೇಕು. ಮಾನವ ಜನ್ಮದ ಶ್ರೇಷ್ಠತೆಯನ್ನು ತಮ್ಮ ಬೋಧನೆಗಳಲ್ಲಿ ಕೈವಾರ ತಾತಯ್ಯ ಸಾರಿದ್ದಾರೆ . ಏಕಾಗ್ರತೆಯಿಂದ ತಾತಯ್ಯನವರು ಬೋಧಿಸಿರುವ ತಾರಕ ಮಂತ್ರ ಜಪಿಸಿದರೆ ಪೂರ್ವಕರ್ಮ ನಾಶವಾಗಿ ಮನಸ್ಸು ಸ್ಥಿರವಾಗಿ, ಗುರುವಿನ ಅನುಗ್ರಹ ಸಿಗುತ್ತದೆ” ಎಂದು ಹೇಳಿದರು.
ಆರಾಧನಾ ಮಹೋತ್ಸವ ಅಂಗವಾಗಿ ನಾದಸುಧಾರಸ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇಡೀ ರಾತ್ರಿ ಆಖಂಡ ಸಂಕೀರ್ತನೆ ಹಮ್ಮಿಕೊಳ್ಳಲಾಗಿತ್ತು.
ಯೋಗಿನಾರೇಯಣ ಮಠದ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಸದಸ್ಯರುಗಳಾದ ಬಾಲಕೃಷ್ಣ ಭಾಗವತರ್, ಡಾ.ಎಂ.ವಿ.ಶ್ರೀನಿವಾಸ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ಎಂ. ತ್ಯಾಗರಾಜ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮಠದ ಅನೇಕ ಭಕ್ತರು ಉಪಸ್ಥಿತರಿದ್ದರು.