Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾರ್ಚ್ 7ರಂದು ಸರ್ಕಾರದ ವತಿಯಿಂದ ನಡೆಯುವ ಕೈವಾರ ಯೋಗಿನಾರೇಯಣಾ ಯತಿಂದ್ರರ ಜಯಂತಿಯ (Kaiwara Yogi Nareyana Jayanthi) ಪೂರ್ವಭಾವಿ ಸಭೆ (Preliminary meeting) ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ” ಸಮಾಜ ಸುಧಾರಕ ಕೈವಾರದ ಯೋಗಿನಾರೇಯಣಾ ಯತಿಂದ್ರರ ಜಯಂತಿಯನ್ನು ರಾಜ್ಯದಾದ್ಯಂತ ಮಾರ್ಚ್ 7ರಂದು ಆಚರಿಸಲು ಸರ್ಕಾರ ಆದೇಶಿಸಿದ್ದು ಅದರಂತೆ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ನಂದಿರಂಗ ಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ವೇದಿಕೆ ಕಾರ್ಯಕ್ರಮದಲ್ಲಿ ಯೋಗಿನಾರೇಯಣಾ ಯತಿಂದ್ರ ಅವರ ವಿಚಾರಧಾರೆಗಳ ಕುರಿತು ಭಾಷಣ, ಪುಷ್ಪ ನಮನ, ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಗಿದ್ದು ಅದಕ್ಕೂ ಮುನ್ನ ನಗರದಲ್ಲಿ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ, ಕೋಲಾಟದೊಂದಿಗೆ ತಾತಯ್ಯನವರ ಕೀರ್ತನೆ ಗಾಯನ , ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ” ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಅಹ್ವಾನ ಪತ್ರಿಕೆ ಮುದ್ರಣ, ವಿತರಣೆ, ವೇದಿಕೆ ಸಿದ್ಧತೆ, ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ತಾತಯ್ಯನವರ ಕೀರ್ತನೆಗಳ ಗಾಯನ ಸ್ಪರ್ಧೆ, ಕಾರ್ಯಕ್ರಮ ಆಯೋಜನೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ತಿಳಿಸಿ ಕಾರ್ಯಭಾರ ಹಂಚಿಕೆ ಮಾಡಿದರು.
ಸಭೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನವೀನ್ ಕಿರಣ್, ಕೈವಾರ ಮಠದ ಕಾರ್ಯದರ್ಶಿ ಬಾಲಕೃಷ್ಣ ಭಾಗವತರು, ಲಕ್ಷ್ಮಿನಾರಾಯಣಪ್ಪ, ಪುರದ ಗಡ್ಡೆ ಕೃಷ್ಣಪ್ಪ, ಗಂಗಾಧರ್, ಪೂರ್ಣಪ್ರಜ್ಞಾ ವೆಂಕಟೇಶ್, ಮುರಳಿ, ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.