Chintamani : ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ (Kaiwara) ಶ್ರೀಯೋಗಿನಾರೇಯಣ ಮಠದಲ್ಲಿ ಗುರುವಾರ ಸದ್ಗುರು ಯೋಗಿ ನಾರೇಯಣ ತಾತಯ್ಯ ಜಯಂತ್ಯುತ್ಸವವನ್ನು (Yogi Nareyana Jayantotsava) ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯೋಗಿನಾರೇಯಣ ಮಠದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಆತ್ಮಧ್ಯಾನ ಮಂದಿರವನ್ನು ಧರ್ಮಾಧಿಕಾರಿ ಎಂ.ಆರ್.ಜಯರಾಮ್ ದಂಪತಿ ಉದ್ಘಾಟಿಸಿದರು.
ಜಯಂತ್ಯುತ್ಸವದ ಅಂಗವಾಗಿ ತಾತಯ್ಯನವರಿಗೆ ಘಂಟನಾದ, ಸುಪ್ರಭಾತ, ಗೋಪೂಜೆ, ಪಂಚಾಮೃತ ಹಾಗೂ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ನಂತರ ತಾತಯ್ಯನವರ ಉತ್ಸವ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಮಂಗಳವಾದ್ಯಗಳೊಂದಿಗೆ ಕರೆತಂದು ರಥದಲ್ಲಿ ಕೂರಿಸಿ ದೇವಾಲಯದ ಆವರಣದಲ್ಲಿ ರಥೋತ್ಸವ ನಡೆಸಲಾಯಿತು. ತಾತಯ್ಯ ಜಯಂತ್ಯುತ್ಸವ ಅಂಗವಾಗಿ ವಿಶೇಷ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಭಾಗವಹಿಸಿದ್ದರು.