
Kalanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ತೆಂಗಿನ ಕಾಯಿ ಮಂಡಿ (Coconut Market) ಕಾಳನಾಯಕನಹಳ್ಳಿ ಗೇಟ್ ಬಳಿ ಆರಂಭವಾಗಿದ್ದು, ಇಲ್ಲಿ ತೆಂಗಿನ ಕಾಯಿ ಮಾರಾಟಕ್ಕೆ ತರುವ ರೈತನಿಗೆ ಕಮೀಷನ್ ಕಟ್ಟುವ ತಾಪತ್ರಯ ಇಲ್ಲ. ಇನ್ನೊಂದು ಕಡೆ ತೆಂಗಿನ ಕಾಯಿ ಖರೀದಿಸುವ ಗ್ರಾಹಕನ ಮನೆ ಬಾಗಿಲಿಗೆ ಉಚಿತವಾಗಿ ಸಾಗಾಣಿಕೆ ಮಾಡುವ ಸವಲತ್ತು ಇಲ್ಲಿದೆ. ರೈತ ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲ ಇರುವ ಈ ಮಂಡಿಗೆ ದಿನ ಕಳೆದಂತೆ ಹೆಚ್ಚೆಚ್ಚು ರೈತರು, ಗ್ರಾಹಕರು ಬರತೊಡಗಿದ್ದು ವಹಿವಾಟು ಪ್ರಮಾಣವೂ ಹೆಚ್ಚುತ್ತಿದೆ.
ಮದುವೆ, ನಾಮಕರಣ, ಗೃಹ ಪ್ರವೇಶ ಮೊದಲಾದ ಶುಭ ಸಮಾರಂಭದಲ್ಲಿ ಶುಭ ಸೂಚಕ ತೆಂಗಿನ ಕಾಯಿಯನ್ನು ತಾಂಬೂಲವಾಗಿ ಕೊಡಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಕಾಯಿ ಖರೀದಿಗೆ ತಾಲ್ಲೂಕಿನ ಜನರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ನಡೆಯುವ ಮಂಡಿಗೆ ಹೋಗಬೇಕಿತ್ತು. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಜಯಪುರದಲ್ಲಿ ಮಾತ್ರವೇ ತೆಂಗಿನ ಕಾಯಿಯ ಮಂಡಿ ಇರುವುದರಿಂದ ಅಲ್ಲಿ ರಾಜ್ಯದ ನಾನಾ ಮೂಲೆಗಳಿಂದಲೂ ನೂರಾರು ರೈತರು ತೆಂಗಿನ ಕಾಯಿ ಮಾರಾಟಕ್ಕೆ ಬರುತ್ತಾರೆ.
ಹಾಗೆಯೆ ಸಾವಿರಾರು ಮಂದಿ ಗ್ರಾಹಕರು ತೆಂಗಿನ ಕಾಯಿಯನ್ನು ಖರೀದಿಸಲು ಅಲ್ಲಿಗೆ ಹೋಗುತ್ತಾರೆ. ರೈತರಿಂದ ಮಂಡಿಯವರು ತೆಂಗಿನ ಕಾಯಿಯ ರೂಪದಲ್ಲಿ ಕಮೀಷನ್ ಪಡೆದರೆ ಗ್ರಾಹಕರಿಂದ ಶೇ 6 ರಷ್ಟು ಕಮೀಷನ್ ಪಡೆದುಕೊಳ್ಳುತ್ತಾರೆ.
ಆದರೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ-ಎಚ್.ಕ್ರಾಸ್ ಮಾರ್ಗದ ಕಾಳನಾಯಕನಹಳ್ಳಿ ಗೇಟ್ ಬಳಿ ತೆಂಗಿನ ಕಾಯಿ ಮಂಡಿ ಆರಂಭವಾಗಿದ್ದು ಪ್ರತಿ ಭಾನುವಾರ ನಡೆಯಲಿದ್ದು ಇಲ್ಲಿ ರೈತರಿಂದಾಗಲಿ ಗ್ರಾಹಕರಿಂದಾಗಲಿ ಕಮೀಷನ್ ಸಂಗ್ರಹಿಸುವುದಿಲ್ಲ.
ವಿಶೇಷ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ತೆಂಗಿನ ಕಾಯಿ ಖರೀದಿಸುವವರ ಮನೆ ಭಾಗಿಲಿಗೆ ತೆಂಗಿನ ಕಾಯಿಗಳನ್ನು ಉಚಿತವಾಗಿ ಸಾಗಾಟ ಮಾಡಿಕೊಡಲಾಗುತ್ತದೆ. ಹಾಗೆಯೆ ಮಾರಾಟವಾಗದೆ ಉಳಿದುಕೊಳ್ಳುವ ತೆಂಗಿನ ಕಾಯಿಗಳನ್ನು ರೈತರಿಂದ ಮಂಡಿಯವರೆ ಮಾರುಕಟ್ಟೆಯ ಬೆಲೆಗೆ ತೆಂಗಿನ ಕಾಯಿಗಳನ್ನು ಖರೀದಿಸುತ್ತಾರೆ.
ರೈತರಿಗೂ ಗ್ರಾಹಕರಿಗೂ ಅನುಕೂಲಕರವಾದ ಈ “ಭಾರತಿ ತೆಂಗಿನ ಕಾಯಿ ಮಂಡಿ”ಯನ್ನು ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಮಳ್ಳೂರು ಶಿವಣ್ಣ ಅವರು ಉದ್ಘಾಟಿಸಿ ರೈತರಿಗೂ ಗ್ರಾಹಕರಿಗೂ ಅನುಕೂಲ ಆಗಲಿ ಎಂದು ಆಶಿಸಿದರು.
ತೆಂಗಿನ ಕಾಯಿ ಮಂಡಿ ನಡೆಯಲು ಉಚಿತವಾಗಿ ಜಾಗ ನೀಡಿರುವ ಮಂಡಿಯ ಮಾಲೀಕ ಜಿ.ಮಂಜುನಾಥ್, ಗೋಲ್ಡನ್ ಸಾಯಿ ಜೈವಿಕ ಗೊಬ್ಬರ ಮಳಿಗೆಯ ಆನಂದ್ ಕುಮಾರ್, ತೆಂಗಿನಕಾಯಿ ಬೆಳೆಗಾರರಾದ ಚನ್ನರಾಯಪಟ್ಟಣ ರಮೇಶ್, ಗುಬ್ಬಿ ನಾಗರಾಜ್, ತಿಪಟೂರು ಯೋಗಿ ಹಾಜರಿದ್ದರು.