Kolar : ಕೋಲಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾರವರ ಅಧ್ಯಕ್ಷತೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ (Kannada Jyothi Rathayatre) ಸ್ವಾಗತ ಪೂರ್ವ ಸಿದ್ಧತೆ ಸಭೆ (Preliminary Meeting) ನಡೆಸಲಾಯಿತು.
ಡಿಸೇಂಬರ್ 20, 21 ಹಾಗೂ 22ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯಲ್ಲಿ ನವೆಂಬರ್ 21, 22 ಹಾಗೂ 23ರಂದು ಸಂಚರಿಸಲಿದೆ. ಈ ರಥ ಯಾತ್ರೆ ಅಭೂತಪೂರ್ವ ಸ್ವಾಗತಕ್ಕೆ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳುವಂತೆ, ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ “ಕನ್ನಡ ಜ್ಯೋತಿ ರಥಯಾತ್ರೆಯನ್ನು ಜಿಲ್ಲೆಯ ಗಡಿಭಾಗದಲ್ಲಿ ರಾಮಸಂದ್ರ ಗೇಟ್ ಬಳಿ ಹಾಗೂ ಬಂಗಾರಪೇಟೆ ತಾಲ್ಲೂಕಿನ ಗಡಿ ಭಾಗದಲ್ಲಿ ಪೂರ್ಣಕುಂಭದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸ್ವಾಗತಮಾಡಿಕೊಳ್ಳಬೇಕು. ಕನ್ನಡ ಜ್ಯೋತಿ ರಥಯಾತ್ರೆ ಸಂಚಾರದ ಸಮಯದಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಬೇಕು” ಎಂದು ತಿಳಿಸಿದರು.
ಕೋಲಾರ ನಗರದ ಕ್ಲಾಕ್ ಟವರ್ ಮಾರ್ಗವಾಗಿ ಹೊಸ ಬಸ್ ನಿಲ್ದಾಣ ಮೂಲಕ ಮೆಕ್ಕೆ ಸರ್ಕಲ್ ಬಳಸಿಕೊಂಡು ಬಂಗಾರಪೇಟೆ ವೃತ್ತದ ವರೆಗೆ ಮೆರವಣಿಗೆ ನಡೆಯಲಿದ್ದು ಯಾವುದೇ ಲೋಪವಾಗದಂತೆ ಅತ್ಯಂತ ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.