Chkkaballapur : ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ತೆಲುಗು ಚಿತ್ರ ಪ್ರದರ್ಶನವಾಗುತಿರುವುದನ್ನು ಖಂಡಿಸಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಚಿತ್ರ ಮಂದಿರದ ಬಳಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಖಂಡ ಅಗಲಗುರ್ಕಿ ಚಲಪತಿ ಮಾತನಾಡಿ “ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ನವೆಂಬರ್ ತಿಂಗಳ ಪೂರ್ತಿ ಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದ್ದರೂ, ಜಿಲ್ಲಾಡಳಿತದ ಆದೇಶವನ್ನು ಚಿತ್ರಮಂದಿರದವರು ಗಾಳಿಗೆ ತೂರಿದ್ದಾರೆ, ಕಾನೂನು ರೀತಿಯಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿದ್ದೇವೆ ಎಂದು ಹೇಳುವ ಚಿತ್ರ ಮಂದಿರದವರು, ತೆರಿಗೆ ವಂಚಿಸಿದ್ದಾರೆ. ನೀರಿನ ವ್ಯವಸ್ಥೆ, ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ ಚಿತ್ರಮಂದಿರದಲ್ಲಿ ಸರಿಯಾಗಿಲ್ಲ. ಇಲ್ಲಿ ಹಲವು ಅಪಘಾತಗಳು ನಡೆದಿವೆ. ಜಿಲ್ಲಾಡಳಿತ ಇವರ ಪರವಾನಗಿ ಪರಿಶೀಲಿಸಬೇಕು. ಪರವಾನಗಿಗೆ ಸಂಬಂಧಿಸಿದ ಅಂಶಗಳನ್ನು ನಾಮಫಲಕದಲ್ಲಿ ಹಾಕಬೇಕು” ಎಂದು ಹೇಳಿದರು.
ರಾಮೇಗೌಡ, ಶ್ರೀಧರ್ ಬಾಬು, ರವಿಕುಮಾರ್, ಜಿ.ಕೆ.ಲೋಕೇಶ್, ಉದಯಶಂಕರ್, ದೇವರಾಜ್, ಆಂತೋಣಿ ಸ್ವಾಮಿ, ಚಂದ್ರಶೇಖರ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.