Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿನಿಯರಿಗೆ ಎನ್.ಎಸ್.ಯು.ಐ ವತಿಯಿಂದ ಆಯೋಜಿಸಿದ್ದ ಕರಾಟೆ ತರಬೇತಿ ಕಾರ್ಯಕ್ರಮದಲ್ಲಿ ಎನ್.ಎಸ್.ಯು.ಐ ಮಾಜಿ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ತಡ್ಡೆಗಟ್ಟುವ ಉದ್ದೇಶದಿಂದ NSUI ವತಿಯಿಂದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲಿ . ಇದಕ್ಕಾಗಿ ವಿದ್ಯಾರ್ಥಿನಿಯರು ಕರಾಟೆಯನ್ನು ಕಲಿತುಕೊಂಡಲ್ಲಿ ತತ್‌ಕ್ಷಣಕ್ಕೆ ಬರುವ ತೊಂದರೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕರಾಟೆ ಶಿಕ್ಷಕರ ಮೂಲಕ ತರಬೇತಿ ನೀಡಲಾಗುತ್ತಿದೆ. ಹೆಣ್ಣುಮಕ್ಕಳು ಈಗ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯಲ್ಲಿ ದೌರ್ಜನ್ಯವಾದರೂ ಅದನ್ನು ಪ್ರತಿರೋಧಿಸಬೇಕು ಎಂದು ಹೇಳಿದರು.
ತಹಶಿಲ್ದಾರ್ ರಾಜೀವ್ ಮಾತನಾಡಿ, ಕರಾಟೆ ಕಲಿಯುವುದರ ಮೂಲಕ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಕನಿಷ್ಠ ಜ್ಞಾನವೊಂದು ಸಿಕ್ಕಂತಾಗುತ್ತದೆ. ಸಮಾಜ ಘಾತಕರಿಂದ ಪ್ರಾಣವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸ್ವಯಂ ರಕ್ಷಣೆ ಮತ್ತು ಆತ್ಮಸ್ಥೈರ್ಯ ಕಲ್ಪಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಹೆಚ್ಚು ಸಹಕಾರಿಯಾಗಿದೆ ಎಂದರು.
ದಿವ್ಯಭಾರತ್ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಮ್ಮ ವಿದ್ಯಾರ್ಥಿಗಳಾದ ನಂದೀಶ್ ಮತ್ತು ರಾಜೇಶ್ ಅವರೊಂದಿಗೆ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಿದರು.
ಉಚ್ಛ ನ್ಯಾಯಾಲಯದ ವಕೀಲರಾದ ಸುನೀತಾ, ಗೀತಾ ಪ್ರಾಂಶುಪಾಲ ಲಕ್ಷ್ಮಯ್ಯ, ಉಪನ್ಯಾಸಕರಾದ ಮುನಿರಾಜು, ಎನ್.ಎಸ್.ಯು.ಐ ತಾಲ್ಲೂಕು ಕಾರ್ಯದರ್ಶಿ ಪ್ರಸನ್ನಕುಮಾರ್, ಉಪಾಧ್ಯಕ್ಷ ಅಫ್ರಿದ್ ಹಾಜರಿದ್ದರು.