Chikkaballapur : ಚಿಕ್ಕಬಳ್ಳಾಪುರ ನಗರದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾ ಕಸಾಪ ಮತ್ತು ಕಾಲೇಜು ಸಹಯೋಗದಲ್ಲಿ ಕಸಾಪ 110ನೇ ಸಂಸ್ಥಾಪನಾ ದಿನಾಚರಣೆ (Kasapa Foundation Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ ಮಾತನಾಡಿ “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಾಡಭಾಷೆಯ ಪ್ರೀತಿ, ವಿಶ್ವವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ 1915ರಲ್ಲಿ ಜನ್ಮತಾಳಿದ ಕನ್ನಡ ಸಾಹಿತ್ಯ ಪರಿಷತ್ತು 110 ವರ್ಷಗಳ ತನ್ನ ಸಾರ್ಥಕ ಪ್ರಯಾಣದಲ್ಲಿ ನಾಡಭಾಷೆಯ ಅಸ್ಮಿತೆಗಾಗಿ ಟೊಂಕಕಟ್ಟಿ ನಿಂತಿದೆ. ಇದು ಕನ್ನಡಿಗರ ಹೆಮ್ಮೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡದೆ ವಿಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ನಾಲ್ವಡಿ ಅವರ ಆಶಯದಂತೆ ಜನಸಾಮಾನ್ಯರತ್ತ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಶಿಡ್ಲಘಟ್ಟ ಅಧ್ಯಕ್ಷ ನಾರಾಯಣದಾಸರಹಳ್ಳಿ ಪಟೇಲ್ ನಾರಾಯಣಸ್ವಾಮಿ, ರವಿಕುಮಾರ್, ಮಂಜುನಾಥ್, ಸುಶೀಲಾ ಮಂಜುನಾಥ್, ಗೀತಾ, ಉಪನ್ಯಾಸಕಾರ ಎಚ್.ಹರೀಶ್, ನರಸಿಂಹಮೂರ್ತಿ, ಮುನಿರಾಜು ಎಂ.ಅರಿಕೆರೆ, ಗಂಗಾಧರ್, ರಘು ಮತ್ತಿತರರು ಪಾಲ್ಗೊಂಡಿದ್ದರು.