KGF : ಕೆಜಿಎಫ್‌ನ ಉರಿಗಾಂವೃತ್ತದಲ್ಲಿ 13 ದಿನಗಳಿಂದ ಗುತ್ತಿಗೆ ಕಾರ್ಮಿಕರು ಧರಣಿ (KGF BEML Contract Workers Protest) ನಡೆಸುತ್ತಿರುವ ಸ್ಥಳಕ್ಕೆ ಭಾನುವಾರ ಸಂಸದ ಮಲ್ಲೇಶ್ ಬಾಬು ಅವರ ಮನವಿ ಮೇರೆಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ (H D Kumarswamy) ಭೇಟಿ (Visit) ನೀಡಿ ಚರ್ಚಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ ‘‘ನಾನು ಈಗಾಗಲೇ ಕಂಪನಿಯ ಸಿಎಂಡಿ ಅವರೊಂದಿಗೆ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸೋಮವಾರ ನಾನು ದೆಹಲಿಗೆ ತೆರಳಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿಯಾಗಿ ಆನಂತರ ನಾನು ಬೆಮಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಕಾರ್ಮಿಕರು ಉದ್ಯೋಗ ಕಾಯಂ, ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳನ್ನು ಕೇಳುತ್ತಿದ್ದಾರೆ. ಅವರ ನೋವು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ಉದ್ಯೋಗ ಕಾಯಂ ಮಾಡುವುದಕ್ಕೆ ನನಗೆ ಸಾಧ್ಯವಿಲ್ಲ. ಆದರೆ, ಇತರ ಬೇಡಿಕೆಗಳನ್ನು ನಾವು ಪರಿಶೀಲಿಸಬಹುದು. ಧರಣಿ ಮುಗಿಸಿ ಕೆಲಸಕ್ಕೆ ಹಾಜರಾದರೆ ನಾವು ಚರ್ಚೆ ನಡೆಸಲು ಸಿದ್ಧನಿದ್ದೇನೆ. ಈ ಧರಣಿಯಿಂದ ಕಂಪನಿಗೂ, ದೇಶಕ್ಕೂ, ಹಾಗೂ ಕಾರ್ಮಿಕರಿಗೂ ಒಳ್ಳೆಯದು ಅಲ್ಲ. ನನ್ನ ಮಾತಿನ ಮೇಲೆ ನಂಬಿಕೆ ಇಟ್ಟು ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾಗಿ’’ ಎಂದು ತಿಳಿಸಿದರು.
ಮುಷ್ಕರ ಕೈಬಿಡುವ ಬಗ್ಗೆ ಸಚಿವರ ಒತ್ತಾಯದ ಕುರಿತು ಎಲ್ಲಾ ಮುಖಂಡರು ಸೇರಿ ಚರ್ಚೆ ನಡೆಸಿ ತೀರ್ಮಾನಿಸೋಣ ಎಂದು ಹೇಳಿದ್ದಾರೆ. ಈ ಸಂದರ್ಭ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮಾಜಿ ಶಾಸಕ ವೈ.ಸಂಪಂಗಿ, ಮುಖಂಡ ಸಿಎಂಆರ್ ಶ್ರೀನಾಥ್, ನಾರಾಯಣಸ್ವಾಮಿ ಹಾಗೂ ಅನೇಕ ಸಂಘಟನೆಗಳ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು