KGF : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಮಲ್ (BEML Workers Protest) ಗುತ್ತಿಗೆ ಕಾರ್ಮಿಕರು ಶನಿವಾರ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ 26 ಗಂಟೆಗಳ ನಂತರ ಭಾನುವಾರ ಸಂಸದ ಮಲ್ಲೇಶಬಾಬು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭರವಸೆ ಮೇರೆಗೆ ಅಂತ್ಯಗೊಂಡಿದೆ.
ವೇತನ ಪರಿಷ್ಕರಣೆ, ನ್ಯಾಯಾಲಯದ ಆದೇಶ ಪಾಲನೆ, ಸ್ಥಳೀಯರನ್ನು ಕಡೆಗಣಿಸಿ ಉತ್ತರ ಭಾರತೀಯರಿಗೆ ಉದ್ಯೋಗದಲ್ಲಿ ಮಣೆ ಹಾಕುವ ಆಡಳಿತ ಮಂಡಳಿಯ ಧೋರಣೆ ವಿರುದ್ಧ ಕಾರ್ಮಿಕರು ಶನಿವಾರ ಮುಂಜಾನೆ ಮುಷ್ಕರ ಆರಂಭಿಸಿದ್ದರು. ಗುತ್ತಿಗೆ ಕಾರ್ಮಿಕರು ಖಾಯಂ ನೌಕರರಲ್ಲ. ಅವರು ಪಾಳಿ ಮುಗಿದ ತಕ್ಷಣ ಕಾರ್ಖಾನೆಯಿಂದ ಹೊರ ಹೋಗಬೇಕು. ಅವರ ಉಸ್ತುವಾರಿಯನ್ನು ಅವರನ್ನು ನೇಮಕ ಮಾಡಿಕೊಂಡ ಗುತ್ತಿಗೆದಾರ ವಹಿಸಿಕೊಳ್ಳಬೇಕು ಎಂದು ಬೆಮಲ್ ಅಧಿಕಾರಿಗಳು ಕೂಡ ಪಟ್ಟು ಹಿಡಿದಿದ್ದರಿಂದ ಕಾರ್ಮಿಕರಿಗೆ ಊಟ ಮತ್ತು ತಿಂಡಿ ಸರಬರಾಜು ಸ್ಥಗಿತಗೊಳಿಸಲಾಯಿತು. ಮುಷ್ಕರನಿರತರಿಗೆ ಹೊರಗಿನಿಂದ ಊಟ ತರಲು ಆಡಳಿತ ವರ್ಗ ಅವಕಾಶ ಕೊಡಲಿಲ್ಲ. ಇದರಿಂದ ನಿತ್ರಾಣರಾಗಿದ್ದ ಮೂವರು ಕಾರ್ಮಿಕರನ್ನು ಬೆಮಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು.
ಭಾನುವಾರ ಬೆಳಗ್ಗೆ ಶಾಸಕಿ ಎಂ.ರೂಪಕಲಾ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಉಪ ವಿಭಾಗಾಧಿಕಾರಿ ಮೈತ್ರಿ, ಡಿವೈಎಸ್‌ಪಿ ಪಾಂಡುರಂಗ ಮುಂತಾದವರು ಬೆಮಲ್ ಅಡಳಿತ ವರ್ಗದೊಡನೆ ಮಾತುಕತೆ ನಡೆಸಿದರು.