
Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ವಿಸ್ತರಣೆಯ ಹೆಸರಿನಲ್ಲಿ ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. “ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ” ಎಂಬ ಉದ್ದೇಶದೊಂದಿಗೆ, ರೈತರ ನಿಯೋಗ ಹಾಗೂ ಹಸಿರು ಸೇನೆ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, “ನಾವು ಕೈಗಾರಿಕೆಗಳಿಗೆ ವಿರೋಧಿಗಳಲ್ಲ. ಆದರೆ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಬೇಕು. ಫಲವತ್ತಾದ ನೀರಾವರಿ ಭೂಮಿಯ ಸ್ವಾಧೀನಕ್ಕೆ ನಾವು ಕಠಿಣವಾಗಿ ವಿರೋಧಿಸುತ್ತೇವೆ. ಈ ಹೋರಾಟಕ್ಕಾಗಿ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ” ಎಂದು ಸ್ಪಷ್ಟಪಡಿಸಿದರು.
ಸಮಸ್ಯೆಗಳ ನಿಕೇಷಕ್ಕೆ ಸ್ಪಂದಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ಈ ತಿಂಗಳ 12 ಅಥವಾ 19ರಂದು ರೈತರ ಸಭೆ ಕರೆಯಲಾಗುವುದು. ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಬಹುಮತದ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತರ ನಿಯೋಗವು ಕೆಐಎಡಿಬಿಯ ಆಯುಕ್ತ ಮಹೇಶ್ ಅವರನ್ನು ಸಹ ಭೇಟಿಯಾಗಿ, ಟೆಂಡರ್ ರದ್ದುಪಡಿಸುವ ಹಾಗೂ ಜಮೀನು ಮಾರಾಟ, ವಿಭಾಗ, ಸಾಲ ಪ್ರಕ್ರಿಯೆಗಳಿಗೆ ಅಡೆತಡೆ ನೀಡುತ್ತಿದ್ದ ತಾತ್ಕಾಲಿಕ ನಿರ್ಬಂಧವನ್ನು ನಿವಾರಿಸುವಂತೆ ಮನವಿ ಸಲ್ಲಿಸಿದರು. ಆಯುಕ್ತರು ಈ ಸಂಬಂಧ ಸ್ಪಂದಿಸಿ, ಈಗಾಗಲೇ ಕರೆಯಲಾಗಿದ್ದ ಸರ್ವೆ ಟೆಂಡರ್ ಅನ್ನು ರದ್ದುಪಡಿಸಿರುವುದಾಗಿ ತಿಳಿಸಿದರು. ಜೊತೆಗೆ ಉಪನೋಂದಣಿ ಕಚೇರಿಯಲ್ಲಿ ಯಾವುದೇ ಅಡ್ಡಿಯಿಲ್ಲದೆ ಜಮೀನು ಸಂಬಂಧಿತ ವ್ಯವಹಾರಗಳನ್ನು ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
“ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 2823 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡದಿರುವ ಕುರಿತು ನಾವು ಸರ್ಕಾರದ ಮುಂದೆ ಸ್ಪಷ್ಟ ನಿಲುವು ಹಂಚಿದ್ದೇವೆ. ರೈತರ ಒಗ್ಗಟ್ಟಿಗೆ ಸ್ಪಂದಿಸಿದ ಸಚಿವರು ಹಾಗೂ ಆಯುಕ್ತರಿಂದ ಸೂಕ್ತ ಭರವಸೆ ಸಿಕ್ಕಿದೆ,” ಎಂದು ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.