Kolar : ಕೋಲಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೋಲಾರ ಲೋಕಸಭಾ ಚುನಾವಣೆ (Lokasabha Election) ಮತ ಎಣಿಕೆ (Vote Counting) ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಭಾನುವಾರ 2ನೇ ಹಂತದ ತರಬೇತಿ ಕಾರ್ಯಾಗಾರ (Workshop) ಆಯೋಜಿಸಲಾಗಿತ್ತು.
ಜೂನ್ 4ರಂದು ಕೋಲಾರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವವರು ಅಂದು ಬೆಳಿಗ್ಗೆ 6.30ರೊಳಗೆ ಎಣಿಕೆ ಕೇಂದ್ರದಲ್ಲಿ ಹಾಜರಾಗಬೇಕು. ಮತ ಎಣಿಕೆ ಕೇಂದ್ರದೊಳಗೆ ಕಂಪ್ಯೂಟರ್, ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಮತ ಎಣಿಕೆ ಕಾರ್ಯದಲ್ಲಿ ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ಬಳಿಕ ಕಂಟ್ರೋಲ್ ಯೂನಿಟ್ ಯಂತ್ರದಲ್ಲಿನ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್, ಸಹಾಯಕ ಚುನಾವಣೆ ಅಧಿಕಾರಿಗಳು, ತಾಲ್ಲೂಕಿನ ತಹಶೀಲ್ದಾರ್, ಮತ ಎಣಿಕೆ ಸಿಬ್ಬಂದಿ ಉಪಸ್ಥಿತರಿದ್ದರು.