Gudibande : ರಾಜ್ಯದಾದ್ಯಂತ ಹಮ್ಮಕೊಂಡಿರುವ ಭೂ–ಸುರಕ್ಷಾ ಯೋಜನೆಯಡಿ (Land Protection act) ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯಕ್ರಮಕ್ಕೆ ಬುಧವಾರ ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, “ಭೂ–ಸುರಕ್ಷಾ ಯೋಜನೆ ಅಡಿ, ರೈತರು ಮತ್ತು ಸಾರ್ವಜನಿಕರಿಗೆ 150 ವರ್ಷಗಳ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ರೈತರು ತಮ್ಮ ಭೂಮಿಯ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಬಹುದು. ಈಗಾಗಲೇ 31 ತಾಲ್ಲೂಕುಗಳಲ್ಲಿ 8 ತಿಂಗಳ ಹಿಂದೆ ಆರಂಭಗೊಂಡ ಪೈಲಟ್ ಯೋಜನೆಯಡಿ 14,87,000 ಕಡತಗಳನ್ನು ಸ್ಕ್ಯಾನ್ ಮಾಡಿ, 7.95 ಕೋಟಿಯಷ್ಟು ಪುಟಗಳನ್ನು ಗಣಕೀಕರಿಸಲಾಗಿದೆ. ಉಳಿದ 209 ತಾಲ್ಲೂಕುಗಳಲ್ಲಿ 150 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ತಹಶೀಲ್ದಾರ್ ನ್ಯಾಯಾಲಯದಲ್ಲಿ 3 ತಿಂಗಳಿಗಿಂತ ಮೀರಿದ 10,774 ಪ್ರಕರಣಗಳು ಬಾಕಿಯಾಗಿದ್ದವು. ಅವುಗಳನ್ನು ಪರಿಹರಿಸಿ, 409 ಕ್ಕೆ ಇಳಿಸಲಾಗಿದ್ದು ಉಪವಿಭಾಗಾಧಿಕಾರಿ ಮಟ್ಟದಲ್ಲಿ 6 ತಿಂಗಳಿಗಿಂತ ಹೆಚ್ಚು ಅವಧಿ ಮೀರಿದ 59,339 ಬಾಕಿಯಾಗಿದ್ದ ಪ್ರಕರಣಗಳನ್ನು 22,400 ಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಶೂನ್ಯಕ್ಕೆ ತರಲಾಗುವುದು”” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಕಂದಾಯ ಇಲಾಖೆ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.