Sidlaghatta : ಆರ್ಥಿಕವಾಗಿ ದುರ್ಬಲರು, ಅನಕ್ಷರಸ್ಥರು ಸೇರಿದಂತೆ ಜನಸಾಮಾನ್ಯರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಕಾಯಿದೆ ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕರೆಹನುಮಂತಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1987ರಲ್ಲಿ ಉಚಿತ ಕಾನೂನು ಸೇವೆ ಕಾಯಿದೆ ರೂಪುಗೊಂಡರೂ, ಜಾರಿಗೆ ಬಂದಿದ್ದು 1995 ರಲ್ಲಿ. ಪ್ರಸ್ತುತ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ದುರ್ಬಲರಿಗೆ ಕಾನೂನು ನೆರವು, ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಸಾಮಾಜಿಕ ಬದಲಾವಣೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹತ್ವದ ಪಾತ್ರ ವಹಿಸಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ ಮಾತನಾಡಿ ಯಾರೊಬ್ಬರೂ ಕಾನೂನಿನ ಮೂಲಕ ಪರಿಹಾರ ಪಡೆದುಕೊಳ್ಳುವಲ್ಲಿ ವಂಚಿತರಾಗಬಾರದು. ಈ ಆಶಯದಡಿ ಜಾರಿಗೆ ತಂದಿರುವ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು. ಅವ್ಯವಹಾರ ಕಂಡು ಬಂದಲ್ಲಿ ನಮ್ಮ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಬೇಕು ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಬೇಕೆಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಚಂದ್ರಶೇಖರಗೌಡ, ಎಂ.ಬಿ.ಲೋಕೇಶ್, ಪ್ರಭಾರಿ ಪ್ರಾಂಶುಪಾಲ ಡಿ.ಲಕ್ಷ್ಮಯ್ಯ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು, ಪ್ರಾಧ್ಯಾಪಕರಾದ ಶಿವಾರೆಡ್ಡಿ, ಶ್ರೀಕೃಷ್ಣ ಪರಮಾತ್ಮ, ರಮೇಶ್, ಶ್ರೀಧರ್, ಚಂದ್ರಶೇಖರ್, ಹಾಜರಿದ್ದರು.