Chikkaballapur : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Lokasabha Election) CPM ಅಭ್ಯರ್ಥಿ ಎಂ.ಪಿ ಮುನಿವೆಂಕಟಪ್ಪ ಬುಧವಾರ ನಾಮಪತ್ರ (Nomination) ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಬಿ.ವಿ ರಾಘವಲು ” ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ. ಜನರ ಸಂಕಷ್ಟಗಳನ್ನು ನಿವಾರಿಸುವ ಯಾವ ಯೋಜನೆಗಳು ಜಾರಿಯಾಗಲಿಲ್ಲ. ರೈತರು, ಕಾರ್ಮಿಕರು, ಕೂಲಿಕಾರರು, ದಲಿತರು, ಅಲ್ಪಸಂಖ್ಯಾತರನ್ನು ಬಲಪಡಿಸದ ಮೋದಿ, ಆದಾನಿ, ಅಂಬಾನಿ ಅವರ ಆದಾಯ ದುಪ್ಪಟ್ಟುಗೊಳಿಸಿದರು. ಚುನಾವಣಾ ಬಾಂಡ್ ವಿಚಾರವಾಗಿ ನ್ಯಾಯಾಲಯದಲ್ಲಿ ಹೋರಾಡಿ ಹಗರಣ ಬಯಲಿಗೆ ಎಳೆದಿದ್ದು ಸಿಪಿಎಂ. ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎನ್ನುತ್ತಲೆ ಮೋದಿ ₹ 8 ಸಾವಿರ ಕೋಟಿ ಚುನಾವಣಾ ಬಾಂಡ್ ಅನ್ನು ತಮ್ಮ ಪಕ್ಷಕ್ಕೆ ಕೊಡಿಸಿದರು. ಈ ವಿಚಾರದಲ್ಲಿ ಕಾಂಗ್ರೆಸ್ ಕೂಡಾ ಅದೇ ರೀತಿ ಇದೆ. ಕರ್ನಾಟಕದಲ್ಲಿ ತೆರಿಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ, ಕೇರಳ ಸರ್ಕಾರ ಇದೇ ವಿಚಾರದಡಿ ಹೋರಾಟ ಮಾಡಿದಾಗ ಬೆಂಬಲ ನೀಡಲಿಲ್ಲ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಸಿಪಿಎಂ ಅಭ್ಯರ್ಥಿಗೆ ನೀವು ಮತಹಾಕಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮಿ, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಸಿಪಿಎಂ ಜಿಲ್ಲಾ ಮುಖಂಡ ಡಾ.ಅನಿಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ, ಕೆ.ಪ್ರಕಾಶ್, ಗೋಪಾಲಕೃಷ್ಣ ಅರಳಹಳ್ಳಿ, ಮುಖಂಡ ಚಂದ್ರತೇಜಸ್ವಿ, ಗೌರಮ್ಮ, ಮಂಜುನಾಥ್, ರಘುರಾಮ ರೆಡ್ಡಿ, ಜಯರಾಮ ರೆಡ್ಡಿ, ಸಿದ್ದಗಂಗಪ್ಪ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.